ಬೆಳೆಹಾನಿ ಪರಿಹಾರ ಸಮೀಕ್ಷೆ ಅಚ್ಚುಕಟ್ಟಾಗಿ ನಡೆಯಬೇಕು: ಸಚಿವರ ಎಚ್ಚರಿಕೆ

ರಾಯಚೂರು : ನಮ್ಮ ಜಮೀನಿಗೆ ಅಧಿಕಾರಿಗಳು ಬಂದಿಲ್ಲ, ಸಮೀಕ್ಷೆ ಮಾಡಿಲ್ಲ, ಬೆಳೆ ಹಾನಿಯಾದರೂ ಪರಿಹಾರ ಸಿಗಲಿಲ್ಲ ಎಂಬ ರೀತಿಯ ದೂರುಗಳು ರೈತರಿಂದ ಬಂದರೆ, ಅಧಿಕಾರಿಗಳನ್ನು ಹೊಣೆಯಾಗಿಸಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬೆಳೆಹಾನಿ ಜಂಟಿ ಸಮೀಕ್ಷೆ ಅತ್ಯಂತ ಅಚ್ಚುಕಟ್ಟಾಗಿ ನಡೆಯಬೇಕೆಂದು ಸೂಚಿಸಿದರು. ಹಾನಿಗೊಳಗಾದ ಪ್ರತಿಯೊಂದು ಹೊಲಕ್ಕೂ ಭೇಟಿ ನೀಡಿ ಸರ್ವೆ ಮಾಡಬೇಕು ಮತ್ತು ರೈತರಿಗೆ ಸಮರ್ಪಕ ಪರಿಹಾರ ಒದಗಿಸಬೇಕು ಎಂದರು.
ಜನ, ಜಾನುವಾರು ಮತ್ತು ಮನೆ ಹಾನಿ ಪ್ರಕರಣಗಳಿಗೂ ಕಾಲಮಿತಿಯೊಳಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅವರು ಮಾತನಾಡಿ, ಅಧಿಕಾರಿಗಳು ಕಚೇರಿಗಳಲ್ಲಿ ಕೂತುಬಿಡದೆ, ತಂಡವಾಗಿ ನೇರವಾಗಿ ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ರೈತರಿಗೆ ಪರಿಹಾರ ದೊರೆಯಲಿದೆ ಎಂಬ ವಿಶ್ವಾಸ ಮೂಡಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್ ಅವರು ವಿದ್ಯುತ್ ಪರಿವರ್ತಕಗಳು ಮುಳುಗಡೆಯಾಗಿರುವುದರಿಂದ ಅವುಗಳಿಗೆ ತಕ್ಷಣ ಬದಲಾವಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರ ಶಾಸಕರಾದ ಡಾ. ಎಸ್. ಶಿವರಾಜ್ ಪಾಟೀಲ ಅವರು, ರೈತರು ಟ್ರಾನ್ಸ್‌ಫಾರ್ಮರ್‌ಗಾಗಿ ಸಾಲಿನಲ್ಲಿ ನಿಲ್ಲುವಂತಾಗಬಾರದು, ಎಲ್ಲಾ ತಾಲೂಕುಗಳಲ್ಲಿ ಅಗತ್ಯ ಟ್ರಾನ್ಸ್‌ಫಾರ್ಮರ್‌ಗಳ ಖರೀದಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಮಸ್ಕಿ ಶಾಸಕರಾದ ಆರ್. ಬಸನಗೌಡ ತುರವಿಹಾಳ ಅವರು ದಾಳಿಂಬೆ ಸೇರಿದಂತೆ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿರುವುದರಿಂದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು, ರಸ್ತೆಗಳ ರಿಪೇರಿ ಕೂಡ ತಕ್ಷಣ ಆಗಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಕಳೆದ ಶನಿವಾರದಿಂದಲೇ ಜಂಟಿ ಸಮೀಕ್ಷೆ ಆರಂಭವಾಗಿದ್ದು, ತೀವ್ರ ಮಳೆಯಿಂದಾಗಿ ಪ್ರಥಮ ಹಂತದಲ್ಲಿ ಸುಮಾರು 25,000 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೊಳಗಾಗಿದೆ. ಇದುವರೆಗೆ ಶೇ.18ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಮಾಹಿತಿ ನೀಡಿದರು.
ಸಭೆಯಲ್ಲಿ ಮಾನವಿ ಶಾಸಕರಾದ ಹಂಪಯ್ಯ ನಾಯಕ, ಕರೆಮ್ಮ ಜಿ ನಾಯಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.







