ರಾಜ್ಯ ಸಿವಿಲ್ ಸೇವಾ ಹುದ್ದೆಗಳಿಗೆ ನೇರ ನೇಮಕಾತಿ; ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿ ಅನ್ವಯವಾಗುವಂತೆ ವರ್ಷಗಳ ಸಡಿಲಿಕೆ
ರಾಯಚೂರು : ರಾಜ್ಯ ಸರ್ಕಾರವು ಎಲ್ಲ ನಾಗರಿಕ ಸೇವಾ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ನೀಡಿರುವ ಆದೇಶವನ್ನು ಹೊರಡಿಸಿದೆ. ಹಲವು ಜನಪ್ರತಿನಿಧಿಗಳು ಮತ್ತು ಸಂಘಟನೆಗಳಿಂದ ಬಂದ ಮನವಿಗಳನ್ನು ಪರಿಗಣಿಸಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅನುಮೋದನೆಯೊಂದಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈ ಆದೇಶವನ್ನು ಪ್ರಕಟಿಸಿದೆ.
ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಯಾಗುವವರೆಗೆ ಸಿವಿಲ್ ಸೇವೆಗಳಲ್ಲಿ ಮೀಸಲಾತಿ ಅನ್ವಯವಾಗುವ ವೃಂದಗಳ ಹುದ್ದೆಗಳಿಗೆ ನೇರ ನೇಮಕಾತಿ ಅಥವಾ ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಹೊಸ ಅಧಿಸೂಚನೆ ಹೊರಡಿಸಬಾರದೆಂದು ಸರ್ಕಾರ ಈ ಮೊದಲು ಸೂಚಿಸಿತ್ತು.
ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಪರಿಷ್ಕರಣೆಗಳೊಂದಿಗೆ ಅಂಗೀಕರಿಸಿ, ಪರಿಶಿಷ್ಟ ಜಾತಿಯ 101 ಜಾತಿಗಳನ್ನು ಐದು ಪ್ರವರ್ಗಗಳ ಬದಲಿಗೆ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಎಂದು ಮೂರು ಪ್ರವರ್ಗಗಳಾಗಿ ವರ್ಗೀಕರಿಸಲಾಗಿದೆ. ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಶೇಕಡಾ 17 ಮೀಸಲಾತಿಯನ್ನು ಕ್ರಮವಾಗಿ ಪ್ರವರ್ಗ-ಎಗೆ 6%, ಪ್ರವರ್ಗ-ಬಿಗೆ 6%, ಮತ್ತು ಪ್ರವರ್ಗ-ಸಿಗೆ 5% ರಷ್ಟು ನಿಗದಿಪಡಿಸಿ ತಕ್ಷಣದಿಂದ ಜಾರಿಗೊಳಿಸಲಾಗಿದೆ.
ಹಿಂದೆ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 2 ವರ್ಷಗಳ ಸಡಿಲಿಕೆ ನೀಡಲಾಗಿತ್ತು. ಆದರೆ, ಹೆಚ್ಚಿನ ವಯೋಮಿತಿ ಸಡಿಲಿಕೆ ನೀಡುವಂತೆ ಜನಪ್ರತಿನಿಧಿಗಳು ಹಾಗೂ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಈ ಮನವಿಗಳನ್ನು ಪರಿಗಣಿಸಿದ ಸರ್ಕಾರವು ಒಮ್ಮೆ ಮಾತ್ರ (as a one-time measure) ಕ್ರಮವಾಗಿ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ 06.09.2025ರ ಹಿಂದಿನ ಆದೇಶವನ್ನು ಹಿಂಪಡೆದು, ಹೊಸ ಆದೇಶವನ್ನು ಪ್ರಕಟಿಸಲಾಗಿದೆ.
ಹೊಸ ನಿಯಮದ ಪ್ರಕಾರ, 31-12-2027ರವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಎಲ್ಲಾ ಅಧಿಸೂಚನೆಗಳಿಗೆ ಈ ಸಡಿಲಿಕೆ ಅನ್ವಯವಾಗಲಿದೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು) ಅಧಿಕೃತ ಆದೇಶವನ್ನು ಹೊರಡಿಸಿದೆ.







