ಬೈಕ್ ನಲ್ಲಿ ಡ್ರಾಪ್ ಕೊಟ್ಟು ಅಪಹರಣಕ್ಕೆ ಯತ್ನ ಆರೋಪ : ಸಾರ್ವಜನಿಕರಿಂದ ವ್ಯಕ್ತಿಗೆ ಥಳಿತ

ರಾಯಚೂರು :ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ವ್ಯಾಪ್ತಿಯಲ್ಲಿ ಅಪ್ರಾಪ್ತೆಯರನ್ನು ಅಪಹರಿಸಲು ಯತ್ನಿಸಿದನೆಂಬ ಆರೋಪದ ಮೇಲೆ ವ್ಯಕ್ತಿಯೊರ್ವರನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ.
ಕುರ್ಡಿ ಗ್ರಾಮದ ಕುರಿಗಾಹಿಯ ಇಬ್ಬರು ಪುತ್ರಿಯರು (5ನೇ ತರಗತಿ ಹಾಗೂ 2ನೇ ತರಗತಿ) ಮನೆಯಿಂದ ಹೊರಗೆ ಹೊಗುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊರ್ವ “ನಿಮ್ಮ ತಂದೆ ಕರೆದುಕೊಂಡು ಬರಲು ಹೇಳಿದ್ದಾರೆʼʼ ಎಂದು ಹೇಳಿ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದಾನೆ. ನಮ್ಮ ತಂದೆ ಕುರಿ ಮೇಯಿಸುವ ದಾರಿಯಲ್ಲಿ ಹೋಗುತ್ತಿಲ್ಲ ಎಂದು ಅನುಮಾನಗೊಂಡ ಬಾಲಕಿ ಕೇಳಿಕೊಂಡರೂ ವ್ಯಕ್ತಿ ಗಮನ ಕೊಡದಿದ್ದಾಗ, ಕಂಬಲತ್ತಿ ಗ್ರಾಮದ ಹತ್ತಿರ ಒಂದು ಬಾಲಕಿ ಬೈಕ್‌ನಿಂದ ಜಿಗಿದು ಕಿರುಚಾಡಿ ತಪ್ಪಿಸಿಕೊಂಡಿದ್ದಾಳೆ. ಬಳಿಕ ಸ್ಥಳೀಯರ ಸಹಾಯದಿಂದ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದಳು. ಸಂಬಂಧಿಕರು ಸೇರಿ ಆರೋಪಿಯನ್ನು ಹಿಡಿದು, ಇನ್ನೊರ್ವ ಬಾಲಕಿಯನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಆರೋಪಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದು, ಆರೋಪಿ ರಾಯಚೂರು ತಾಲೂಕಿನ ದಿನ್ನಿ ಗ್ರಾಮದವನು ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಮಾನ್ವಿ ಠಾಣೆಯ ಪಿಎಸ್‌ಐ ಪ್ರತಿಕ್ರಿಯೆ ನೀಡಿ “ಅಪಹರಣದ ಯತ್ನ ಸುಳ್ಳು. ಅಪಹರಣದ ಯತ್ನ ಸುಳ್ಳು, ಬಾಲಕಿಯರೇ ಡ್ರಾಪ್ ಕೇಳಿದ್ದರಿಂದ ಬೈಕ್ ಹತ್ತಿಸಿಕೊಂಡಿದ್ದ. ಸಾರ್ವಜನಿಕರು ಅನುಮಾನಗೊಂಡು ವ್ಯಕ್ತಿಯನ್ನು ಹಿಡಿದು ಥಳಿಸಿ ಠಾಣೆಗೆ ಕರೆತಂದಿದ್ದಾರೆ. ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಆರೋಪಿ ಮದ್ಯಪಾನ ಮಾಡಿದ್ದನು. ದಿನ್ನಿ ಗ್ರಾಮಸ್ಥರು ಹಾಗೂ ಬಾಲಕಿಯ ತಂದೆ-ಸಂಬಂಧಿಕರ ಸಮ್ಮುಖದಲ್ಲಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ನಂತರ ಬಿಡುಗಡೆ ಮಾಡಲಾಗಿದೆ ಎಂದು ಕುರ್ಡಿ ಗ್ರಾಮಸ್ಥರು ತಿಳಿಸಿದ್ದಾರೆ.







