Raichur | 371 ಜೆ ದುಂಡು ಮೇಜಿನ ಸಭೆ, ಹೋರಾಟಗಾರರ ಸಮಾವೇಶ

ರಾಯಚೂರು : ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ವ್ಯವಸ್ಥೆ ತೀವ್ರ ಹದಗೆಟ್ಟಿದ್ದು, ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ. ಪ್ರಾಥಮಿಕ ಶಿಕ್ಷಣ ಹಾಳು ಮಾಡಿದರೆ ದೇಶವನ್ನೇ ಹಾಳು ಮಾಡಿದಂತಾಗುತ್ತದೆ ಎಂದು ಸಾಮಾಜಿಕ ಚಿಂತಕ ಹಾಗೂ ಹೋರಾಟಗಾರ ಆರ್.ಕೆ.ಹುಡುಗಿ ಕಳವಳ ವ್ಯಕ್ತಪಡಿಸಿದರು.
ನಗರದ ಎಸ್‌ಎಲ್‌ವಿ ಹೋಟೆಲ್‌ನ ಕೊಠಾರಿ ಫಂಕ್ಷನ್ ಹಾಲ್‌ನಲ್ಲಿ ಹೈದರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರ ಆಯೋಜಿಸಿದ್ದ ‘ದುಂಡು ಮೇಜಿನ ಸಭೆ ಮತ್ತು 371(ಜೆ) ಹೋರಾಟಗಾರರ ಸಮಾವೇಶ ಹಾಗೂ ಕಲ್ಯಾಣ ಕರ್ನಾಟಕ ವಿಕಾಸ ವೇದಿಕೆ ಸ್ಥಾಪನಾ ಸಮಾರಂಭ’ ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಇದು ಸಮಾಜದ ಭವಿಷ್ಯಕ್ಕೆ ದೊಡ್ಡ ಅಪಾಯವಾಗಿದೆ. ಒಂದು ದೇಶವನ್ನು ನಾಶ ಮಾಡಲು ಅಣುಬಾಂಬ್ ಅಗತ್ಯವಿಲ್ಲ. ಅಲ್ಲಿನ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಹಾಳಾದರೆ ಸಾಕು ಎಂದು ಅವರು ಅಭಿಪ್ರಾಯಪಟ್ಟರು.
“ಆಳುವ ಸರ್ಕಾರಕ್ಕೆ ಈ ಭಾಗದ ಮಕ್ಕಳ ಬಗ್ಗೆ ಚಿಂತೆಯಿಲ್ಲ. ನಾವು ಇಂದು ಮನುಷ್ಯತ್ವದ ಬರಗಾಲದಲ್ಲಿ ಬದುಕುತ್ತಿದ್ದೇವೆ. ಶಿಕ್ಷಣ, ಸಂಸ್ಕಾರ ಹಾಗೂ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಸಮಾಜವನ್ನು ಎಚ್ಚರಿಸುವ ಅಗತ್ಯವಿದೆ” ಎಂದು ಹೇಳಿದರು.
371(ಜೆ) ಹೋರಾಟಗಾರ ಡಾ.ರಜಾಕ್ ಉಸ್ತಾದ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಇನ್ನೂ ಹಿಂದುಳಿದಿದೆ ಎಂದು ಹೇಳಿದರು.
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ರಚಿಸಿದ್ದ ಪ್ರೊ. ನಂಜುಂಡಪ್ಪ ವರದಿ ಜಾರಿಯಾದರೂ ನಿರೀಕ್ಷಿತ ಮಟ್ಟದ ಸುಧಾರಣೆ ಆಗಿಲ್ಲ. 371(ಜೆ) ಜಾರಿಗೆ ಎರಡು ದಶಕಗಳಾದರೂ ತಾರತಮ್ಯ ನಿವಾರಣೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
371(ಜೆ) ಪ್ರಮಾಣ ಪತ್ರ ನೀಡುವಲ್ಲಿ ಗೊಂದಲಗಳು ಹೆಚ್ಚುತ್ತಿದ್ದು, ನಕಲಿ ಪ್ರಮಾಣ ಪತ್ರಗಳ ಹಂಚಿಕೆ ಹೆಚ್ಚಾಗಿದೆ. ಇದರಿಂದ ನಿಜವಾದ ಅರ್ಹರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಾಧರ ನಾಯಕ, ಪ್ರತಾಪಗೌಡ ಪಾಟೀಲ, ಬಸನಗೌಡ ಬ್ಯಾಗವಾಟ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಶಾಸಕಿ ಕರೆಮ್ಮ ಜಿ. ನಾಯಕ, ಲೆಕ್ಕ ಪತ್ರ ಪರಿಶೋಧಕ ಪನ್ನರಾಜ, ಶಾರದಾ ಹುಲಿನಾಯಕ, 371 (ಜೆ) ಹೋರಾಟಗಾರರ ಸಮಾವೇಶ ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಹರವಿ ನಾಗನಗೌಡ, ಭಾರದ್ವಾಜ್, ಅಲ್ಲಮಪ್ರಭು ಪಾಟೀಲ ಬೆಟ್ಟದೂರು, ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ, ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ಹೋರಾಟಗಾರರಾದ ಕೆ.ಜಿ ವೀರೇಶ,ಚನ್ನಬಸವ ಜಾನೆಕಲ್, ಜಮಾತೆ ಇಸ್ಲಾಂ ಹಿಂದ್ ಮುಖಂಡ ಸಮದ್ ಪಾಶ, ಮಾರೆಪ್ಪ ಹರವಿ ಮತ್ತಿತರರು ಇದ್ದರು.
ನಂಜುಂಡಪ್ಪ ವರದಿ ಅನುದಾನ ದುರ್ಬಳಕೆ: ಉಸ್ತಾದ್ ಆರೋಪ
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಮೀಸಲಾದ ನಂಜುಂಡಪ್ಪ ವರದಿ ಅನುದಾನವನ್ನು ಯದ್ವಾತದ್ವಾ ಖರ್ಚು ಮಾಡಲಾಗಿದೆ ಎಂದು ಡಾ. ರಜಾಕ್ ಉಸ್ತಾದ್ ಆರೋಪಿಸಿದರು. ನೀರಾವರಿ ಅಭಿವೃದ್ಧಿಗೆ ಬಳಸಬೇಕಿದ್ದ ಅನುದಾನವನ್ನು ಕೆಬಿಜೆಎನ್‌ಎಲ್ ಬಾಂಡ್ ಸಾಲ ತೀರಿಸಲು ಬಳಸಲಾಗಿದೆ. ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಸೇರಿದಂತೆ ಸಾಮಾನ್ಯ ಯೋಜನೆಗಳಿಗೆ ಸರ್ಕಾರದ ಸಾಮಾನ್ಯ ಅನುದಾನ ಬಳಸಬೇಕಾಗಿದ್ದು, ವಿಶೇಷ ಅನುದಾನ ಬಳಸಬಾರದು ಎಂದು ಹೇಳಿದರು. ಈ ಕುರಿತು ಹಲವಾರು ಬಾರಿ ಪ್ರಶ್ನೆ ಮಾಡಿದರೂ ಯಾವುದೇ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.






