ರಾಯಚೂರು | ಹರಿಜನವಾಡ ಮಹಾಮಾತೆ ಕಂಚು ಮಾರೆಮ್ಮ ದೇವಸ್ಥಾನದಲ್ಲಿ ದಸರಾ ಹಬ್ಬ ಆಚರಣೆ: ಪಲ್ಲಕ್ಕಿ ಮೆರವಣಿಗೆ

ರಾಯಚೂರು: ಪ್ರತಿ ವರ್ಷದಂತೆ ಈ ಬಾರಿಯೂ ನಗರದ ಹರಿಜನವಾಡದ ಶ್ರೀ ಮಹಾಮಾತೆ ಕಂಚು ಮಾರೆಮ್ಮ ದೇವಾಲಯದಲ್ಲಿ ದಸರಾ ಹಬ್ಬದ ನಿಮಿತ್ತ ದೇವಿಯ ಪಲ್ಲಕ್ಕಿ ಮಹೋತ್ಸವ ಭಕ್ತಿ ವೈಭವದಿಂದ ಜರುಗಿತು.
ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ದೇವಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ವಿವಿಧ ವಾದ್ಯ–ಭಜಂತ್ರಿಗಳ ಸಮ್ಮಿಳನದೊಂದಿಗೆ ಮೆರವಣಿಗೆ ಆರಂಭವಾಯಿತು. ನಗರದಲ್ಲಿ ಅದ್ದೂರಿಯಾಗಿ ಸಂಚರಿಸಿದ ಮೆರವಣಿಗೆ, ಸವಾರಮ್ಮ ದೇವಾಲಯದ ಸಮೀಪ ಮರಕ್ಕೆ ಪೂಜೆ ಸಲ್ಲಿಸಿ ಪುನಃ ಮೂಲ ದೇವಾಲಯಕ್ಕೆ ತಲುಪಿತು.
ಒಂಬತ್ತು ದಿನಗಳ ನವರಾತ್ರಿ ಉತ್ಸವ ಈ ಮಹೋತ್ಸವದೊಂದಿಗೆ ಸಂಪನ್ನಗೊಂಡಿತು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ಸಂಜೆ ಬನ್ನಿ ಹಂಚಿಕೆ, “ಬಂಗಾರದಂತೆ ಇರೋಣ” ಎಂಬ ಸಂದೇಶದೊಂದಿಗೆ ಬನ್ನಿ ಮುಡುವ ಸಂಪ್ರದಾಯ ನೆರವೇರಿತು. ಇದೇ ಸಂದರ್ಭದಲ್ಲಿ ದಾಂಡಿಯಾ ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಾಲಯ ಆವರಣದಲ್ಲಿ ನಡೆದವು.
ಮಹೋತ್ಸವದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಪಿ. ಯಲ್ಲಪ್ಪ, ಆರ್. ಚನ್ನಪ್ಪ, ಪಿ. ಅಮರೇಶ, ಜೆ. ಶಂಶಾಲಪ್ಪ ಪೂಜಾರಿ, ಪಾಳ್ಯಂ ಗಣೇಶ, ಪಿ. ನಲ್ಲಾರೆಡ್ಡಿ, ಪಿ. ಸವಾರಪ್ಪ, ರವೀಂದ್ರ ಜಲ್ದಾರ್, ಎಸ್. ರಾಜು, ಜೆ.ಎಂ. ಮೌನೇಶ, ಪಿ. ನರಸಪ್ಪ, ಜಂಬಣ್ಣ, ಜೆ. ಬೋಳಬಂಡಿ, ಹುಲಿಗೆಪ್ಪ, ಚಂದ್ರು ಭಂಡಾರಿ, ಬಾಬು, ರಾಜೇಂದ್ರ, ಸಚಿನ್, ಜೆ. ಶ್ಯಾಮ್ ಸೇರಿದಂತೆ ಅನೇಕ ಭಕ್ತರು, ಮಹಿಳೆಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.





