ರಾಯಚೂರು | ದೌರ್ಜನ್ಯದಿಂದ ಮೃತಪಟ್ಟ ಎಸ್ಸಿ, ಎಸ್ಟಿ ಕುಟುಂಬದ ಅವಲಂಬಿತರಿಗೆ ಸ್ಪಂದನೆ ನೀಡಲು ಡಿಸಿ ಸೂಚನೆ

ರಾಯಚೂರು: ದೌರ್ಜನ್ಯದಿಂದ ಮೃತಪಟ್ಟ ಪ್ರಕರಣಗಳಲ್ಲಿ ಮೃತರ ಕುಟುಂಬದ ಅವಲಂಬಿತರಿಗೆ ಸರ್ಕಾರದಿಂದ ನಿಯಮಾನುಸಾರ ಸಿಗುವ ಸೌಲಭ್ಯಗಳ ಬಗ್ಗೆ ಜನರಿಗೆ ಅರಿವು ಇಲ್ಲದೆ ಇರುವುದರಿಂದ, ಅಧಿಕಾರಿಗಳು ಅಂತಹ ಕುಟುಂಬಗಳಿಗೆ ಭೇಟಿ ನೀಡಿ, ಅವರಿಗೆ ಸ್ಪಂದನೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಸೂಚಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅನುಸೂಚಿತ ಜಾತಿ ಮತ್ತು ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ದೌರ್ಜನ್ಯ ಪ್ರಕರಣಗಳಲ್ಲಿ ಮೃತರ ಕುಟುಂಬದ ಅವಲಂಬಿತರಿಗೆ ಪರಿಹಾರ ಹಾಗೂ ಸರ್ಕಾರಿ ನೌಕರಿ ಸಿಗುವಂತಾಗಬೇಕು. ಅದಕ್ಕಾಗಿ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಲು ಮಾರ್ಗದರ್ಶನ ನೀಡಬೇಕು ಎಂದು ಅವರು ತಿಳಿಸಿದರು. ಇಂತಹ ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಗೆ ವಿಳಂಬವಾಗದಂತೆ ಪೊಲೀಸ್ ಇಲಾಖೆಯ ಜೊತೆ ಸಮನ್ವಯ ಸಾಧಿಸಲು ಸೂಚಿಸಿದರು.
ಜಿಲ್ಲೆಯಲ್ಲಿ ದಾಖಲಾಗಿರುವ ದೌರ್ಜನ್ಯ ಪ್ರಕರಣಗಳ ಕುರಿತು ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಒಂದು ತಿಂಗಳ ಗಡುವು ವಿಧಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಕಿ ಪರಿಹಾರ ಪ್ರಕರಣಗಳ ವಿವರಗಳನ್ನು ಸಭೆಯಲ್ಲಿ ನೀಡಿದರು.
ನಗರದ ಹೊರವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ವಸತಿ ಸಮುಚ್ಚಯದ ಅಡಿಯಲ್ಲಿ ಒಂದು ಮನೆಗೆ ಒಟ್ಟು ₹9 ಲಕ್ಷ ವೆಚ್ಚವಾಗುತ್ತಿದ್ದು, ಅದರಲ್ಲಿ 3 ಲಕ್ಷ ರೂ. ವನ್ನು ಸರ್ಕಾರವೇ ಭರಿಸುತ್ತದೆ. ಈ ಯೋಜನೆಯ ಲಾಭವನ್ನು ಎಸ್ಸಿ, ಎಸ್ಟಿ ಜನರು ಪಡೆಯಲು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಸ್ಮಶಾನ ಜಾಗದ ಸಂರಕ್ಷಣೆ ಕುರಿತಂತೆ ಸದಸ್ಯ ರಘುವೀರ ನಾಯಕ ಪ್ರಸ್ತಾಪಿಸಿದ್ದು, ಗುರುತಿಸಲಾದ ಸ್ಮಶಾನ ಜಮೀನುಗಳಿಗೆ ಕಾಂಪೌಂಡ್ ನಿರ್ಮಿಸಲು ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಇದಲ್ಲದೆ, ಕಾನೂನು ಬಾಹೀರವಾಗಿ ನಕಲಿ ಜಾತಿ ಪತ್ರಗಳನ್ನು ಸಿದ್ಧಪಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ, ಐಎಎಸ್ ಪ್ರೊಬೆಷನರಿ ಅಧಿಕಾರಿ ಪುರುರಾಜ್ ಸಿಂಗ್ ನಾಮ ನಿರ್ದೇಶಿತ ಸದಸ್ಯರಾದ ರವೀಂದ್ರ ಜಲ್ದಾರ್, ಕೆ ಇ ಕುಮಾರ, ಹೇಮರಾಜ ಅಸ್ಕಿಹಾಳ, ರವಿಕುಮಾರ ಅಸ್ಕಿಹಾಳ, ಎನ್ ರಘುವೀರ ನಾಯಕ, ಪವನ್ ಕಿಶೋರ ಪಾಟೀಲ, ಬಸವರಾಜ ನಕ್ಕುಂದಿ, ಟಿ ಸುಧಾಮ ಸೇರಿದಂತೆ ವಿವಿಧ ಇಲಾಖೆಗಳ ಇದ್ದರು.







