ರಾಯಚೂರು | ಮಾಹಿತಿ ಹಕ್ಕು ಆಯೋಗದಿಂದ ಅರ್ಜಿದಾರರ ಮೇಲ್ಮನವಿಯನ್ನು ಇತ್ಯರ್ಥಪಡಿಸಲು ವಿಳಂಬ : ಅಮರಪ್ಪ ಆರೋಪ

ರಾಯಚೂರು : ಮಾಹಿತಿ ಹಕ್ಕು ಆಯೋಗವೂ ಅರ್ಜಿದಾರರಿಗೆ ಸಕಾಲದಲ್ಲಿ ಮೇಲ್ಮನವಿಗಳನ್ನು ಇತ್ಯರ್ಥಪಡಿಸದೇ ವಿಳಂಬ ದೋರಣೆ ಮಾಡುವ ಮೂಲಕ ಅಧಿಕಾರಿಗಳ ರಕ್ಷಣೆಗೆ ನಿಂತಿದೆ. ಎಂಟುವರೆ ವರ್ಷದ ನಂತರ ಮೇಲ್ಮನವಿ ವಿಚಾರಣೆ ನಿಗಧಿಪಡಿಸಿರುವುದೇ ನಿದರ್ಶನವಾಗಿದೆ ಎಂದು ಆರ್ ಟಿಐ ಕಾರ್ಯಕರ್ತ ಅಳ್ಳಪ್ಪ ಅಮರಾಪುರು ಆರೋಪಿಸಿದರು.
ಅವರು ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡ ಕಾಮಗಾರಿಗೆ ಸಂಬಂಧಿಸಿದ ಮಾಹಿತಿಗಾಗಿ ನಾನು 2015ರಲ್ಲಿ ಅರ್ಜಿ ಸಲ್ಲಿಸಿದ್ದೆ. ಮಾಹಿತಿ ನೀಡದ ಕಾರಣ 2017ರ ಜುಲೈ 3ರಂದು ಬೆಂಗಳೂರಿನ ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದೆ. 2017ರ ಏಪ್ರಿಲ್ 3ರಂದು ಆಯೋಗ ವಿಚಾರಣೆ ನಡೆಸಿ, ಮುಂದಿನ ವಿಚಾರಣೆ ದಿನಾಂಕ ನಿಗಧಿಪಡಿಸಿ ಮಾಹಿತಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಎಂಟು ವರ್ಷಗಳು ಕಳೆದ ನಂತರ, ಅಂದರೆ 102 ತಿಂಗಳುಗಳ ಬಳಿಕ, ಇದೀಗ 2025ರ ಅಕ್ಟೋಬರ್ 10ರಂದು ವಿಚಾರಣೆ ನಿಗಧಿಪಡಿಸಲಾಗಿದೆ ಎಂದು ಹೇಳಿದರು.
ಇಷ್ಟು ವರ್ಷಗಳ ನಂತರ ವಿಚಾರಣೆ ನಡೆಸುವುದು ಆಯೋಗವೇ ತನ್ನ ನಿಯಮ ಉಲ್ಲಂಘಿಸಿದಂತಾಗಿದೆ. ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ 30 ದಿನಗಳೊಳಗೆ ಮಾಹಿತಿ ನೀಡಬೇಕೆಂಬುದು ನಿಯಮ. ಆದರೆ ಹತ್ತಾರು ವರ್ಷಗಳಾದರೂ ಮೇಲ್ಮನವಿ ಅರ್ಜಿಗಳನ್ನು ಇತ್ಯರ್ಥಪಡಿಸದಿರುವುದು ಆಯೋಗದ ಕರ್ತವ್ಯಲೋಪದ ನಿದರ್ಶನವಾಗಿದೆ ಎಂದರು.
ಸರ್ಕಾರ ಆಯೋಗದ ಸಿಬ್ಬಂದಿ ಮತ್ತು ಆಯುಕ್ತರಿಗೆ ವೇತನ ನೀಡುತ್ತದೆ. ಮಾಹಿತಿ ಹಕ್ಕು ಕಾಯ್ದೆ ಯುಪಿಎ ಸರ್ಕಾರ ಆಡಳಿತದಲ್ಲಿ ಪಾರದರ್ಶಕತೆ ತರಲು ರೂಪಿಸಿದ ಕಾನೂನು. ಆದರೆ ಅಧಿಕಾರಿಗಳು ಮತ್ತು ಆಯೋಗಗಳು ಸಮಯಕ್ಕೆ ಸರಿಯಾಗಿ ಅರ್ಜಿಗಳ ವಿಲೇವಾರಿ ಮಾಡದಿರುವುದರಿಂದ ಅದು ಭ್ರಷ್ಟ ಅಧಿಕಾರಿಗಳಿಗೆ ಅನುಕೂಲವಾಗಿದೆ ಎಂದು ಟೀಕಿಸಿದರು.
ಸರ್ಕಾರವು ತಕ್ಷಣ ಆಯೋಗದ ಅಧೀನ ಕಾರ್ಯದರ್ಶಿಯಿಂದ ಹಿಡಿದು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅಮಾನತುಗೊಳಿಸಬೇಕು. ಇಲ್ಲವಾದರೆ ಭ್ರಷ್ಟಾಚಾರಕ್ಕೆ ಸರ್ಕಾರವೇ ಬೆಂಬಲ ನೀಡಿದಂತಾಗುತ್ತದೆ. ಎಲ್ಲಾ ಪ್ರಕರಣಗಳಲ್ಲಿಯೂ ನ್ಯಾಯಾಲಯಕ್ಕೆ ಹೋಗಲು ಸಾಧ್ಯವಿಲ್ಲ. ಇಲಾಖಾ ಅಧಿಕಾರಿಗಳು ಜವಾಬ್ದಾರಿಯುತವಾಗಿ ವರ್ತಿಸದಿದ್ದರೆ, ಆಡಳಿತ ವ್ಯವಸ್ಥೆಯೇ ವಿಫಲವಾಗುತ್ತದೆ ಎಂದು ಅಮರಾಪುರು ಎಚ್ಚರಿಸಿದರು.







