ರಾಯಚೂರು | ಹೊಸ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳ ಮಂಜೂರಿಗೆ ಒತ್ತಾಯ

ರಾಯಚೂರು : ನಗರದ ವಾರ್ಡ್ ನಂ.7, 8, 9 ಮತ್ತು 10 ಹಾಗು ವಾರ್ಡ್ ನಂ.32, 5 ಮತ್ತು 34ರ ಅರಬ್ ಮೊಹಲ್ಲಾ, ಶಾಂತಿ ಕಾಲೋನಿ ಮತ್ತು ಬಂದೇನವಾಜ್ ಕಾಲೋನಿ ಪ್ರದೇಶಗಳ ವ್ಯಾಪ್ತಿಯಲ್ಲಿ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸದಸ್ಯ ಸೈಯದ್ ಅಮೀನುಲ್ ಹಸನ್ ಒತ್ತಾಯಿಸಿದ್ದಾರೆ.
ಈ ಕುರಿತು ಅವರು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ವಾರ್ಡ್ ನಂ.7, 8, 9 ಮತ್ತು 10 ರಲ್ಲಿ ಸುಮಾರು 25,000 ರಿಂದ 30,000 ಜನಸಂಖ್ಯೆ ವಾಸಿಸುತ್ತಿದ್ದು, ವಾರ್ಡ್ ನಂ.32, 05 ಮತ್ತು 34ರ ಅರಬ್ ಮೊಹಲ್ಲಾ, ಡ್ಯಾಡಿ ಕಾಲೋನಿ, ಶಾಂತಿ ಕಾಲೋನಿ ಹಾಗೂ ಬಂದೇನವಾಜ್ ಕಾಲೋನಿ ಪ್ರದೇಶಗಳಲ್ಲಿ ಸಹ ಅದೇ ಪ್ರಮಾಣದ ಜನವಸತಿ ಇದೆ ಎಂದು ತಿಳಿಸಿದ್ದಾರೆ. ಈ ಪ್ರದೇಶಗಳಲ್ಲಿ ಯಾವುದೇ ಪ್ರಾಥಮಿಕ ಅಥವಾ ಸಮುದಾಯ ಆರೋಗ್ಯ ಕೇಂದ್ರಗಳಿಲ್ಲದ ಕಾರಣ, ಸಾರ್ವಜನಿಕರು ಸಣ್ಣ ಅನಾರೋಗ್ಯಕ್ಕೂ ರಿಮ್ಸ್ ಆಸ್ಪತ್ರೆಗೆ ತೆರಳಬೇಕಾದ ಪರಿಸ್ಥಿತಿ ಎದುರಾಗುತ್ತಿದೆ ಎಂದಿದ್ದಾರೆ.
ರಾಯಚೂರು ಜಿಲ್ಲೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲೆಗಳ ಪಟ್ಟಿಯಲ್ಲಿ ಸೇರಿದ್ದರೂ, ಇಲ್ಲಿ ಆರೋಗ್ಯ ಸೌಲಭ್ಯಗಳ ಸ್ಥಿತಿ ಅತೀ ದುರ್ಬಲವಾಗಿದೆ. ಕೇಂದ್ರ ಸರ್ಕಾರದ ಭಾರತೀಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ವಿಭಾಗದ 2022–23ರ ವರದಿಯ ಪ್ರಕಾರ, ರಾಯಚೂರು ಜಿಲ್ಲೆಯಲ್ಲಿ ನಿಯಮಾನುಸಾರ 82 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇರಬೇಕಾಗಿದ್ದರೂ ಕೇವಲ 52 ಕೇಂದ್ರಗಳೇ ಕಾರ್ಯನಿರ್ವಹಿಸುತ್ತಿವೆ. ಅದೇ ರೀತಿ 22 ಸಮುದಾಯ ಆರೋಗ್ಯ ಕೇಂದ್ರಗಳು ಇರಬೇಕಾದಲ್ಲಿ ಕೇವಲ 16 ಕೇಂದ್ರಗಳಷ್ಟೇ ಲಭ್ಯವಿದ್ದು, ಇದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ ಎಂದು ಹಸನ್ ಅವರು ತಿಳಿಸಿದ್ದಾರೆ.
ಇದೇ ವೇಳೆ ವಾರ್ಡ್ ನಂ.34ರ ಶಾಂತಿ ಕಾಲೋನಿ, ದೇಚರಾಜ ಅರಸ್ ಕಾಲೋನಿ ಮತ್ತು ಬಂದೇನವಾಜ್ ಕಾಲೋನಿ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲು ಸಹ ಅವರು ಮನವಿ ಮಾಡಿದ್ದಾರೆ.







