ರಾಯಚೂರು | ಪಾಮನಕಲ್ಲೂರು ಕ್ರಾಸ್ ಬಳಿಯ ಬಡಾವಣೆಯ ರಸ್ತೆ ದುರಸ್ತಿಗೊಳಿಸಲು ಒತ್ತಾಯ

ರಾಯಚೂರು: ಹಟ್ಟಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾಮನಕಲ್ಲೂರು ಕ್ರಾಸ್ ಬಳಿಯ ವಾರ್ಡ್ ನಂ. 9ರ ಸರ್ವೆ ನಂ. 405/2 ರ 5.10 ಎಕರೆ ಕೃಷಿ ಜಮೀನನ್ನು ವಾಸಸ್ಥಳ ಉದ್ದೇಶಕ್ಕಾಗಿ 23-1-2013 ರಂದು ಜಿಲ್ಲಾಧಿಕಾರಿಗಳ ಆದೇಶದಂತೆ ಭೂ ಪರಿವರ್ತನೆ ಮಾಡಲಾಗಿದೆ. ನಂತರ 1-4-2013 ರಂದು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರು, ಗುಲ್ಬರ್ಗಾ ಅವರಿಂದ ರೂಪರೇಖೆ ಅನುಮೋದನೆ ದೊರೆತಿತ್ತು. ಈ ಮಂಜೂರಾತಿ ಎರಡು ವರ್ಷಗಳವರೆಗೆ ಮಾತ್ರ ಜಾರಿಯಲ್ಲಿದ್ದು, ಅವಧಿಯಲ್ಲಿ ವಿನ್ಯಾಸ ಅಭಿವೃದ್ಧಿ ಆಗದಿದ್ದರೆ ನವೀಕರಿಸಬೇಕಿತ್ತು.
ಆದರೆ, ಇಂದಿನವರೆಗೂ ರಸ್ತೆ, ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳು ಕಲ್ಪಿಸಲಾಗಿಲ್ಲ. ಅನೇಕ ಬಾರಿ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಸಂಚಾರಕ್ಕೆ ತೊಂದರೆ ಹೆಚ್ಚಾಗಿದೆ.
“ತಕ್ಷಣ ರಸ್ತೆ ದುರಸ್ತಿ ಮಾಡಿ ಮೂಲಸೌಕರ್ಯ ಒದಗಿಸಬೇಕು” ಎಂದು ಬಡಾವಣೆಯ ನಿವಾಸಿಗಳಾದ ಮಹಮ್ಮದ್ ರಫಿ ಮತ್ತು ನಿಂಗಪ್ಪ ಮನವಿ ಮಾಡಿದ್ದಾರೆ.
Next Story





