ರಾಯಚೂರು | ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಹೆಚ್ಚಿನ ಸಾಲ ಸೌಲಭ್ಯಕ್ಕೆ ಪ್ರಯತ್ನ : ಸುಜ್ಞಾನ

ರಾಯಚೂರು : ರಾಯಚೂರು ರಾಜ್ಯದಲ್ಲಿ ಅತೀ ಹಿಂದುಳಿದ ಜಿಲ್ಲೆಯಾಗಿದ್ದು, ವಿಶ್ವಕರ್ಮ ಸಮುದಾಯದವರು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ನಿಗಮದ ವತಿಯಿಂದ ಹೆಚ್ಚಿನ ಸಾಲ ಸೌಲಭ್ಯಗಳು ತಲುಪಿಸಲು ಸರ್ಕಾರದಿಂದ ಈ ಬಾರಿ ಹೆಚ್ಚಿನ ಅನುದಾನ ಪಡೆಯಲು ಪ್ರಯತ್ನಿಸುತ್ತೇನೆ. ಚಿನ್ನ, ಬೆಳ್ಳಿ ಮೇಲಿನ ಜಿಎಸ್‍ಟಿ ಹಣದಲ್ಲಿ ಪಾಲನ್ನು ನಿಗಮಕ್ಕೆ ನೀಡಲು ಮನವಿ ಮಾಡಲಾಗುವುದು ಎಂದು ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನ ಮೂರ್ತಿ ಹೇಳಿದರು.
ಅವರಿಂದು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ವಿಶ್ವ ಕರ್ಮ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಿಲ್ಲದೆ ಸಂಘಟನೆಯ ಕೊರತೆಯಿತ್ತು. ಇದೀಗ ವಿಜಯ ದಶಮಿ ದಿನ ನನ್ನನ್ನು ಅಭಿವೃದ್ಧಿ ನಿಗಮಕ್ಕೆ ನೇಮಕ ಮಾಡಿದ್ದರಿಂದ ನಿಗಮಕ್ಕೆ ಹೊಸ ಚೈತನ್ಯ ಬಂದಿದೆ. ವಿಶ್ವಕರ್ಮರೆಲ್ಲರೂ ಸಂಘಟಿತರಾಗಬೇಕು, ಸರ್ಕಾರದ ಸೌಲಭ್ಯಗಳನ್ನು ಪಡೆದಾಗ ಮಾತ್ರ ಸಮಾಜದ ನಿಜವಾದ ಅಭಿವೃದ್ದಿ ಸಾಧ್ಯವೆಂದರು.
ಸರ್ಕಾರ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ.ಗಳ ಅನುದಾನವನ್ನು ನಿಗದಿಪಡಿಸಿದೆ, ಮುಂದಿನ ದಿನಗಳಲ್ಲಿ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಮಾಣದ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಚಿನ್ನಬೆಳ್ಳಿ ಮಾರಾಟ ಮತ್ತು ಖರೀದಿಯಲ್ಲಿ ಹೆಚ್ಚಿನವರು ಸಮಾಜದವರಿದ್ದು, ಸರ್ಕಾರದ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಹೋಗುತ್ತಿದೆ. ಚಿನ್ನ, ಬೆಳ್ಳಿ ಮೇಲಿನ ಜಿಎಸ್‍ಟಿ ಹಣದಲ್ಲಿ ಪಾಲನ್ನು ನಿಗಮಕ್ಕೆ ನೀಡಲು ಮನವಿ ಮಾಡಲಾಗುವುದು ಎಂದು ತಿಳಿಸಿದರು.
ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಇದೀಗ ಬಡಿಗ, ಕಂಬಾರ, ಅಕ್ಕಸಾಲಿಗ, ಶಿಲ್ಪಿ, ಕಂಚುಗಾರರು ನೇರ ಸಾಲ, ಪಂಚವೃತ್ತಿ ಸಾಲ, ಗಂಗ ಕಲ್ಯಾಣ, ವಾಹನ ಸಾಲ ಹಾಗೂ ಅರಿವು ಯೋಜನೆಗಳಿಗೆ ಅರ್ಹರಾಗಿದ್ದಾರೆ ಎಂದರು.
ರಾಜ್ಯಮಟ್ಟದಲ್ಲಿ ಏಳು ನಿರ್ದೇಶಕರನ್ನು ನೇಮಕ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಪ್ರತಿನಿಧ್ಯ ನೀಡುವಂತೆ ಒತ್ತಾಯಿಸುತ್ತೇನೆ. ಉಡುಪಿ ಜಿಲ್ಲೆಯಲ್ಲಿನ ಮಲ್ಪೆ ಬೀಚ್ ಹತ್ತಿರ ಬೋಟ್ ರಿಪೇರಿ ಮಾಡುವ ವಿಶ್ವಕರ್ಮರಿಗೆ ಪ್ರತಿ ಸಲ 10 ಜನ ಫಲಾನುಭವಿಗಳಿಗೆ ತಲಾ ರೂ.1 ಲಕ್ಷ ಸಾಲ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರಾದ ಮಾರುತಿ ಬಡಿಗೇರ್, ಲಕ್ಷ್ಮೀಪತಿ, ಮೌನೇಶ ಇದ್ದರು.







