ರಾಯಚೂರು | ಅದ್ಧೂರಿಯಾಗಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ

ರಾಯಚೂರು : ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಸಂಸದ ಕುಮಾರ ನಾಯಕ, ಶಾಸಕ ಶಿವರಾಜ ಪಾಟೀಲ್, ಮಹಾ ನಗರ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ ಅವರು ಪೂಜೆ ಸಲ್ಲಿಸುವ ಮೂಲಕ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು.
ನಗರದ ಮಹರ್ಷಿ ವಾಲ್ಮಿಕಿ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ವಾಲ್ಮೀಕಿ ಸಮಾಜದ ಮುಖಂಡರು ಮತ್ತು ಗಣ್ಯರು ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮೆರವಣಿಗೆಯು ವಾಲ್ಮೀಕಿ ವೃತ್ತದಿಂದ ಪ್ರಾರಂಭವಾಗಿ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಬಾಬು ಜಗಜೀವನರಾಮ್ ವೃತ್ತ, ಆಶಾಪೂರ ರಸ್ತೆ, ರಾಜಮಾತ ದೇವಸ್ಥಾನದ ಮುಂಭಾಗದಿಂದ ವಾಲ್ಮೀಕಿ ಭವನದವರೆಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಹಗಲು ವೇಷ, ಹಲಗೆ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ., ಮಹಾನಗರ ಪಾಲಿಕೆ ಆಯುಕ್ತ ಜುಬೇನ್ ಮಹೋಪಾತ್ರ, ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಚನ್ನ ಬಸವ, ಸಣ್ಣ ನರಸಿಂಹ ನಾಯಕ, ರವೀಂದ್ರ ಜಲ್ದಾರ್, ವೆಂಕಟೇಶ ನಾಯಕ ಅಸ್ಕಿಹಾಳ, ರಘುವೀರ್ ನಾಯಕ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.







