ರಾಯಚೂರು | 1.50 ಕೋಟಿ ರೂ. ವೆಚ್ಚದಲ್ಲಿ ತಾಯಮ್ಮ ಕೆರೆ ಅಭಿವೃದ್ಧಿ ಕಾಮಗಾರಿಗೆ ಸಚಿವರಿಂದ ಭೂಮಿ ಪೂಜೆ

ರಾಯಚೂರು : ಜಿಲ್ಲೆಯ ಕೆರೆಗಳ ಸಂರಕ್ಷಣೆಯ ಮೂಲಕ ಅಂತರ್ಜಲ ವೃದ್ಧಿಗಾಗಿ ವೈಜ್ಞಾನಿಕ ಯೋಜನೆಗಳನ್ನು ರೂಪಿಸಿದ್ದೇವೆ. ಈ ಭಾಗದ ಕೆರೆಗಳನ್ನು ಅಭಿವೃದ್ಧಿಗೊಳಿಸಲು ನಮ್ಮ ಇಲಾಖೆಯಿಂದ ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿವೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್.ಎಸ್.ಬೋಸರಾಜು ತಿಳಿಸಿದ್ದಾರೆ.
ಅವರು ರಾಯಚೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗದ್ವಾಲ್ ರಸ್ತೆಯಲ್ಲಿರುವ ತಾಯಮ್ಮ ಕೆರೆಯ 1.50 ಕೋಟಿ ರೂ. ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗಾಗಿ ರೈತರು ಕೆರೆಗಳ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಅನೇಕ ಜಲಚರ ಪ್ರಾಣಿ ಮತ್ತು ಪಕ್ಷಿಗಳ ಜೀವನವೂ ಈ ಕೆರೆಗಳ ಮೇಲೆ ಅವಲಂಬಿತವಾಗಿರುವುದರಿಂದ, ಅಂತರ್ಜಲ ಸಮೃದ್ಧಿಗಾಗಿ ಎಲ್ಲಾ ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದಿಂದ ಪೂರ್ಣಗೊಳಿಸಬೇಕು ಮತ್ತು ಕೆರೆ ವ್ಯಾಪ್ತಿಯ ಭೂಮಿಯನ್ನು ಯಾವುದೇ ರೀತಿಯ ಅತಿಕ್ರಮಣದಿಂದ ಕಾಪಾಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎ.ಪಾಪರಡ್ಡಿ, ಕಾಂಗ್ರೆಸ್ ಮುಖಂಡ ಮುಹಮ್ಮದ್ ಶಾಲಂ, ಕೆ.ಶಾಂತಪ್ಪ, ಜಯಣ್ಣ, ಜಯವಂತರಾವ್ ಪತಂಗೆ, ಜಿ.ಶಿವಮೂರ್ತಿ, ರುದ್ರಪ್ಪ ಅಂಗಡಿ, ಅಮರೇಗೌಡ ಹಂಚಿನಾಳ, ರಾಜು ಪಟ್ಟಿ, ಸುಭಾಷ್, ಮಾಡಗಿರಿ ನರಸಿಂಹಲು, ಎಇಇ ಲೋಕೇಶ್ ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.







