ರಾಯಚೂರು | ಎಪಿಎಂಸಿಯಲ್ಲಿ ಈರುಳ್ಳಿಯ ಬೆಲೆ ಕುಸಿತ : ರೈತರು ಕಂಗಾಲು

ರಾಯಚೂರು: ಎಪಿಎಂಸಿಯಲ್ಲಿ ಕಳೆದ ಒಂದು ವಾರದಿಂದ ಈರುಳ್ಳಿ ತಂದ ರೈತರಿಂದ ಸೂಕ್ತ ಬೆಲೆಗೆ ಈರುಳ್ಳಿ ಖರೀದಿ ಮಾಡದ ಪರಿಣಾಮ ರೈತ ಕಣ್ಣೀರು ಹಾಕುವಂತಹ ಸ್ಥಿತಿ ಉಂಟಾಗಿದೆ.
ನಗರದ ಎಪಿಎಂಸಿ ಆವರಣದಲ್ಲಿ ಜಿಲ್ಲೆಯ ದೇವದುರ್ಗ, ಅರಕೇರಾ ಸೇರಿ ಆಂದ್ರಪ್ರದೇಶ, ತೆಲಂಗಾಣದ ವಿವಿಧ ಜಿಲ್ಲೆಗಳಿಂದ ರೈತರು ಈರುಳ್ಳಿ ತಂದಿದ್ದು, ಕ್ವಿಂಟಾಲ್ ಗೆ 900 ರೂ.ರಿಂದ 1200 ರೂ. ವರೆಗೆ ಇದ್ದು, ಕನಿಷ್ಟ ದರದಲ್ಲಿಯೇ ಈರುಳ್ಳಿ ಖರೀದಿಸಲಾಗುತ್ತಿದೆ. ದರ ಹೆಚ್ಚಾಗುವ ಆಶಾ ಭಾವನೆ ಹೊಂದಿದ್ದ ರೈತರಿಗೆ ಇದು ನಿರಾಸೆಯಾಗಿದೆ. ಕೆಲವರು 800-900 ರೂ. ವರೆಗೆ ಮಾರಾಟ ಮಾಡಿ ಹೋದರೆ, ಅನೇಕ ರೈತರು ಗರಿಷ್ಠ ದರದಲ್ಲಿ ಈರುಳ್ಳಿ ಖರೀದಿ ಮಾಡುತ್ತಿಲ್ಲ ಎಂದು ಎಪಿಎಂಸಿಯಲ್ಲಿಯೇ ಒಂದು ವಾರದಿಂದ ಈರುಳ್ಳಿ ಇಟ್ಟು ಕುಳಿತ್ತಿದ್ದಾರೆ.
ರೈತನೋರ್ವ ಕಳೆದ ಒಂದು ವಾರದಿಂದ ಈರುಳ್ಳಿಯನ್ನು ರಾಶಿ ಹಾಕಿಕೊಂಡು ಕುಳಿತಿದ್ದು, ಒಂದು ವಾರದಿಂದ ಗ್ರಾಮಕ್ಕೂ ತೆರಳದೇ ಈರುಳ್ಳಿಯನ್ನು ಕಾಯುತ್ತಾ ಎಪಿಎಂಸಿ ಆವರಣದಲ್ಲಿಯೇ ತಂಗಿದ್ದಾರೆ. ಈರುಳ್ಳಿಗೆ ಸೂಕ್ತ ಬೆಲೆ ದೊರೆಯುತ್ತದೆ ಎಂದು ಕಾದು ಕುಳಿತರೂ ಪ್ರಯೋಜನವಾಗಿಲ್ಲ. ಈರುಳ್ಳಿ ಬೆಳೆದ ರೈತ ಲಕ್ಷಾಂತರ ರೂ. ಸಾಲ ಮಾಡಿ ಬೆಳೆ ಬೆಳೆದಿದ್ದಾನೆ, ಈರುಳ್ಳಿ ಕಟಾವು ಮಾಡಿಕೊಂಡು ಎಪಿಎಂಸಿ ತಂದದ್ದು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.
ಕಳೆದ ಎರಡು ಮೂರು ದಿನದಿಂದ ಭಾರಿ ಮಳೆಯಾಗುತ್ತಿದ್ದು ಎಪಿಎಂಸಿಯಲ್ಲಿ ಈರುಳ್ಳಿ ರಕ್ಷಣೆ ಮಾಡಿಕೊಳ್ಳಲು ಹರ ಸಾಹಸ ಪಡುತ್ತಿದ್ದಾರೆ. ಇದೀಗ ದಸರಾ ಹಬ್ಬ ಇರುವುದರಿಂದ ಹೆಚ್ಚು ಹಣ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಎಪಿಎಂಸಿ ಅಧಿಕಾರಿಗಳು, ವರ್ತರು ನಿರಾಸೆ ಮೂಡಿಸಿದ್ದಾರೆ.
ಸರ್ಕಾರದ ಈರುಳ್ಳಿ ಬೆಳೆಗೆ ಸೂಕ್ತ ಬೆಲೆ ನಿಗದಿ ಪಡಿಸಿ ರೈತರ ನೆರವಿಗೆ ಬರಬೇಕಿದೆ, ಈರುಳ್ಳಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ರೈತ ಸಂಘಟನೆಯ ಮುಖಂಡ ಲಕ್ಷ್ಮಣಗೌಡ ಮನವಿ ಮಾಡಿದ್ದಾರೆ.







