ರಾಯಚೂರು: ಮಗನ ಅಪಘಾತದ ಬಳಿಕ ಸ್ವಂತ ಖರ್ಚಿನಲ್ಲಿ ರಸ್ತೆ ಗುಂಡಿ ಮುಚ್ಚಿದ ಪೊಲೀಸ್ ಸಿಬ್ಬಂದಿ ಮುಹಮ್ಮದ್ ಅಲಿ

ರಾಯಚೂರು: ಲಿಂಗಸುಗುರು ತಾಲೂಕಿನ ಮೇದಿನಾಪುರದಿಂದ ಹಟ್ಟಿಗೆ ಸಂಪರ್ಕಿಸುವ ರಸ್ತೆಯಲ್ಲಿ ಅನೇಕ ದಿನಗಳಿಂದ ಕಂಡು ಬರುತ್ತಿದ್ದ ಗುಂಡಿಯನ್ನು ಪೊಲೀಸ್ ಠಾಣೆಯ ಸಿಬ್ಬಂದಿ ಮುಹಮ್ಮದ್ ಅಲಿ ಅವರು ಸ್ವಂತ ಖರ್ಚಿನಲ್ಲಿ ಮುಚ್ಚಿದ್ದಾರೆ.
ಮೆದಿನಾಪುರ-ಹಟ್ಟಿ ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಮಹಮ್ಮದ್ ಅಲಿ ಅವರ ಮಗ ಶಾಹಿದ್ ಕಾರು ಪಲ್ಟಿಯಾಗಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನು ಮನಗಂಡು ಬೇರೆಯವರಿಗೆ ಈ ಸ್ಥಿತಿ ಬರಬಾರದು ಎಂದು ಗುಂಡಿ ಮುಚ್ಚಿ ಮಾನವೀಯತೆ ಮೆರೆದಿದ್ದಾರೆ. ಮಹಮ್ಮದ್ ಅಲಿ ಅವರ ಸಾಮಾಜಿಕ ಕಳಕಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ನನ್ನ ಮಗನಿಗೆ ಆದ ದುರ್ಘಟನೆ ಮತ್ತೊಬ್ಬರ ಮನೆಗೆ ಕಣ್ಣೀರು ತರಬಾರದು. ಅದಕ್ಕಾಗಿ ಸ್ವಂತ ದುಡ್ಡಿನಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡಿದೆ,” ಎಂದು ಮುಹಮ್ಮದ್ ಅಲಿ ತಿಳಿಸಿದರು.
ರಸ್ತೆಯಲ್ಲಿದ್ದ ತಗ್ಗು ಹಾಗೂ ಗುಂಡಿಗಳಿಂದ ಪ್ರತಿದಿನ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದರು. ಪೊಲೀಸರಿಗೆ ಇರುವ ಕಾಳಜಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಯಾಕೆ ಇಲ್ಲ. ಹಟ್ಟಿ ಸೇರಿದಂತೆ ಲಿಂಗಸುಗೂರು ತಾಲೂಕಿನ ಅನೇಕ ರಸ್ತೆಗಳು ಮಳೆಯಿಂದ ಹಾಳಾಗಿ ಸಂಚಾರ ಮಾಡದಂತಾಗಿದೆ. ಇನ್ನಾದರೂ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ







