ರಾಯಚೂರು | ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಪ್ರತಿಭಟನೆ

ರಾಯಚೂರು: ‘ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಬೇಕು, ಸೂಕ್ತ ತನಿಖೆ ನಡೆಸದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸೂಕ್ತ ವಿಶೇಷ ನ್ಯಾಯಾಲಯದ ಆದೇಶವನ್ನು ಸರ್ಕಾರ ಪಾಲಿಸಬೇಕು ಎಂದು ಆಗ್ರಹಿಸಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಲಿಂಗಸುಗೂರು ತಾಲೂಕು ಘಟಕದಿಂದ ಹಟ್ಟಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಸೌಜನ್ಯ ‘ಅತ್ಯಾಚಾರದ ನಂತರ ವೈದ್ಯರು ಸಂಗ್ರಹಿಸಿದ ಮಾದರಿಗಳು ಪ್ರಕರಣಕ್ಕೆ ಪೂರಕವಾಗಿರಲಿಲ್ಲ. ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಖುಲಾಸೆ ಸಮಿತಿಯ ಮುಂದೆ ಇಡಲು ಇದು ಸೂಕ್ತವಾದ ಪ್ರಕರಣವಾಗಿದೆ’ ಎಂಬ ನ್ಯಾಯಾಲಯದ ಆದೇಶ ಜಾರಿಯಾಗಬೇಕು. ವಿಶೇಷ ನ್ಯಾಯಾಲಯವು ಗುರುತಿಸಿದಂತೆ ಸೌಜನ್ಯ ಅತ್ಯಾಚಾರ-ಕೊಲೆಯ ವೈದ್ಯಕೀಯ ಸಾಕ್ಷ್ಯಗಳನ್ನು ಸಂಗ್ರಹಿಸದ, ಘಟನಾ ಸ್ಥಳದಿಂದ ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸದೇ ಸಾಕ್ಷ್ಯ ನಾಶ ಮಾಡಿದ ವೈದ್ಯಕೀಯ ಅಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸೌಜನ್ಯ ಹೋರಾಟಗಾರರ ಮೇಲೆ ಧರ್ಮಸ್ಥಳ, ಬೆಳ್ತಂಗಡಿ ಸೇರಿದಂತೆ ರಾಜ್ಯದ ಯಾವುದೇ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಸರ್ಕಾರ ರದ್ದುಗೊಳಿಸಲು ಕ್ರಮವಹಿಸಬೇಕು. ಸಂತ್ರಸ್ತರು, ದೂರುದಾರರು ನೀಡಿದ ದೂರಿನಲ್ಲಿ ಇರುವ ಅಂಶಗಳನ್ನು ಪರಿಗಣಿಸಿ ವಿಚಾರಣೆ ನಡೆಸಬೇಕೇ ಹೊರತು ದೂರಿನ ಹಿಂದಿರುವ ಹೋರಾಟಗಾರರನ್ನು ಗುರಿಯಾಗಿಸುವ ಕ್ರಮಗಳನ್ನು ರಾಜ್ಯದ ಪೊಲೀಸರು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಧರ್ಮಸ್ಥಳದಲ್ಲಿ ದುಡಿಯುವ ಸ್ವಚ್ಚತಾ ಕಾರ್ಮಿಕರಿಗೆಂದೇ ಧರ್ಮಸ್ಥಳದ ಅಶೋಕ ನಗರದಲ್ಲಿ ದಲಿತ ಕುಟುಂಬ ವಾಸವಾಗಿದ್ದು ಅವರಿಗೆ ಸೂಕ್ತ ಮೂಲಸೌಕರ್ಯ, ಕಾನೂನು ರಿತ್ಯ ಸಿಗುವ ಸೌಲಭ್ಯ ಒದಗಿಸಬೇಕು. 128 ದಲಿತ ಕುಟುಂಬಗಳು, ಮುಂಡ್ರುಪಾಡಿಯ 42 ದಲಿತ ಕುಟುಂಬಗಳು ಮತ್ತು ಗ್ರಾಮದ ಇತರ ದಲಿತ ಕುಟುಂಬಗಳಿಗೆ ತಲಾ ಒಂದು ಎಕರೆ ಸರಕಾರಿ ಭೂಮಿಯನ್ನು ಸರ್ಕಾರ ಕೊಡಿಸಬೇಕು. ದಲಿತರ ಮೀಸಲು ಭೂಮಿಯೂ ಸೇರಿದಂತೆ ನೂರಾರು ಎಕರೆ ಸರಕಾರಿ ಭೂಮಿಯನ್ನು ಟ್ರಸ್ಟ್ ಅತಿಕ್ರಮಿಸಿದ್ದು, ಇದನ್ನು ತೆರವುಗೊಳಿಸಿ ಭೂಮಂಜೂರಾತಿ ಕಾಯ್ದೆ ಪ್ರಕಾರವೇ ದಲಿತರಿಗೆ ಕೊಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಹೋರಾಟಗಾರ ರಮೇಶ ವೀರಾಪೂರು, ಶಾಂತಕುಮಾರಿ, ವೆಂಕೋಬ್ ಮೀಯಾಪೂರು, ನಿಂಗಪ್ಪ ಎಂ, ಚೆನ್ನಬಸವ, ಶಂಶುದ್ದೀನ್, ಸಾಹೀರಾಬಾನು, ರಜೀಯಾ ಬೇಗಂ ಮತ್ತಿತರರು ಇದ್ದರು.







