ರಾಯಚೂರು | ಮೂರು ದಿನದಲ್ಲೇ ಸಮೀಕ್ಷೆ ಪೂರ್ಣಗೊಳಿಸಿದ ಶಿಕ್ಷಕ : ಜಿಲ್ಲಾಡಳಿತದಿಂದ ಪ್ರಶಂಸೆ

ರಾಯಚೂರು: ಹಿಂದುಳಿದ ಆಯೋಗದಿಂದ ರಾಜ್ಯದಲ್ಲಿ ನಡೆಸಲಾಗುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ಶಿಕ್ಷಕರೊರ್ವರು ನಿಗದಿತ ಅವಧಿಗಿಂತ ಮೂರೇ ದಿನಗಳಲ್ಲಿ ಪೂರ್ಣಗೊಳಿಸಿದ್ದಾರೆ.
ರಾಜ್ಯ ಸರ್ಕಾರ ಕೈಗೊಂಡಿರುವ ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿಯಲು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮುಂದಾಗಿದ್ದು, ಸೆ.22ರಿಂದ ಸಮೀಕ್ಷೆ ಪ್ರಾರಂಭವಾಗಿತ್ತು. ಸಮೀಕ್ಷೆಗೆ ಜಿಲ್ಲೆಯ ಏಳು ತಾಲೂಕುಗಳಲ್ಲಿ 3178 ಗಣತಿದಾರರನ್ನು ನೇಮಿಸಲಾಗಿತ್ತು.
ಸಮೀಕ್ಷಾ ಕಾರ್ಯದ ಮಧ್ಯೆ ಸರ್ವರ್, ನೆಟ್ವರ್ಕ್ ಸೇರಿ ಸಾಕಷ್ಟು ಸಮಸ್ಯೆಗಳಿಂದ ಗಣತಿದಾರರು ಸರ್ವೆ ಮಾಡಲು ಪರದಾಡುತ್ತಿದ್ದಾರೆ. ಇದರ ಮಧ್ಯೆ ರಾಯಚೂರಿನ ಕಟ್ಲಾಟಕೂರು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಕೃಷ್ಣಮೂರ್ತಿ ಮೂರು ದಿನಗಳಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರೈಸಿ ಕರ್ತವ್ಯ ಮೆರೆದಿದ್ದಾರೆ.
ಕೃಷ್ಣಮೂರ್ತಿ ಅವರ ಕಾರ್ಯಕ್ಕೆ ಜಿಲ್ಲಾಡಳಿತದಿಂದ ಶ್ಲಾಘಿಸಿ, ಅಭಿನಂದನಾ ಪತ್ರ ನೀಡಿ ಗೌರವಿಸಿದೆ. ನಿಗದಿಪಡಿಸಿದ್ದ ಬ್ಲಾಕ್‍ನಲ್ಲಿ ತಮಗೆ ನೀಡಲಾದ 86 ಮನೆಗಳ ಸಮೀಕ್ಷೆ ಮೂರು ದಿನಗಳಲ್ಲಿ ಮುಗಿಸಿದ ಶಿಕ್ಷಕ ಕೃಷ್ಣಮೂರ್ತಿ ಮಲಿಯಾಬಾದ್‍ನಲ್ಲಿ ಸರ್ವರ್ ಸೇರಿದಂತೆ ಹಲವಾರು ಸಮಸ್ಯೆಗಳ ನಡುವೆ ಅವಧಿ ಪೂರ್ವದಲ್ಲೇ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ.
ಸೆ.22 ರಿಂದ 26ರ ವರೆಗೆ ಕೃಷ್ಣಮೂರ್ತಿಗೂ ಸರ್ವರ್ ಸಮಸ್ಯೆ ಎದುರಾಗಿತ್ತು. ಬಳಿಕ ಮೂರು ದಿನದಲ್ಲಿ ಸರ್ವೆ ಮುಕ್ತಾಯಗೊಳಿಸಿದ್ದಾರೆ. ಮನೆಯಲ್ಲಿ ಇಲ್ಲದವರನ್ನು ನಿರಂತರವಾಗಿ ಸಂಪರ್ಕಿಸಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿದ್ದಾರೆ.
ನೆಟ್ವರ್ಕ್ ,ಸರ್ವರ್ ಸಮಸ್ಯೆಗಳ ನಡುವೆ ತಹಶೀಲ್ದಾರ್ ಕಚೇರಿಯಲ್ಲಿ ಸ್ಥಾಪಿಸಲಾಗಿದ್ದ ವಾರ್‍ರೂಮ್‍ಗೆ ನಿರಂತರ ಸಂಪರ್ಕಿಸಿ ಸಮೀಕ್ಷೆ ಮುಗಿಸಿದ್ದು, ಗೂಗಲ್ ಮ್ಯಾಪ್ ಸಮಸ್ಯೆ ನಡುವೆ ಬ್ಲಾಕ್ ಐಡಿ ಆಧಾರದ ಮೇಲೆ ಸಮೀಕ್ಷೆ ನಡೆಸಿ ಪೂರ್ಣಗೊಳಿಸಿರುವುದಾಗಿ ಶಿಕ್ಷಕ ಕೃಷ್ಣಮೂರ್ತಿ ಮಲಿಯಾಬಾದ್ ತಿಳಿಸಿದ್ದಾರೆ.







