ರಾಯಚೂರು | ಜಿಲ್ಲಾಡಳಿತ ಭವನದ ಸಮೀಪದ ಹೊಂಡವೊಂದರಲ್ಲಿ ಎರಡು ಮೊಸಳೆಗಳು ಪತ್ತೆ

ಸಾಂದರ್ಭಿಕ ಚಿತ್ರ
ರಾಯಚೂರು: ನಗರದ ನೂತನ ಜಿಲ್ಲಾಡಳಿತ ಭವನ ಸಮೀಪದ ಬೈಪಾಸ್ ರಸ್ತೆಯ ಪಕ್ಕದಲ್ಲಿ ಬೃಹತ್ತಾದ ಹೊಂಡದಲ್ಲಿ ಎರಡು ಮೊಸಳೆಗಳು ಕಂಡು ಬಂದಿದ್ದು, ಜನರು ಭಯ ಬೀತರಾಗಿದ್ದಾರೆ.
ಬೈಪಾಸ್ ಹತ್ತಿರದ ಸರ್ವೆ ನಂ. 314/2 ರಲ್ಲಿ ಬೃಹತ್ ಹೊಂಡವಿದ್ದು, ಯಕ್ಲಾಸಪೂರ ಗ್ರಾಮಕ್ಕೆ ಹಾದು ಹೋಗುವ ಕಾಲುವೆಯ ಮೂಲಕ ನೀರು ಹೊಂಡಕ್ಕೆ ಸೇರುತ್ತಿದೆ. ಹೊಂಡದ ಬಳಿ ಜಾನುವಾರುಗಳು ಮತ್ತು ಕುರಿಗಳು ನೀರು ಕುಡಿಯಲು ತೆರಳುತ್ತಿದ್ದು, ಕೆಲವು ವೇಳೆ ಮೊಸಳೆಗಳು ಜಾನುವಾರುಗಳ ಮೇಲೆ ದಾಳಿ ಮಾಡಿದ ಘಟನೆಗಳಿವೆ ಎಂದು ರೈತರು ತಿಳಿಸಿದ್ದಾರೆ.
ಹೀಗಾಗಿ ಹೊಂಡದ ಸುತ್ತಮುತ್ತಲಿನ ಜಮೀನುಗಳಲ್ಲಿ ರೈತರು ಮತ್ತು ಕೂಲಿ ಕಾರ್ಮಿಕರು ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಬೈಪಾಸ್ ರಸ್ತೆಯಿಂದ ಹೋದ ಜನರ ಮೇಲೆ ಅಪಾಯ ಉಂಟಾಗಬಹುದು ಎಂಬ ಭಯವೂ ಎದುರಾಗಿದೆ.
ರೈತರು ಮತ್ತು ಯಕ್ಲಾಸಪೂರ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ನಿನ್ನೆ ಬೆಳಗ್ಗೆಯಿಂದ ಸಂಜೆಯವರೆಗೆ ಬಲೆ ಹಾಕಿ ಕಾರ್ಯಾಚರಣೆ ನಡೆಸಿದ್ದಾರೆ. ಮೊಸಳೆಗಳು ಬಲೆಗೆ ಬಿಳದೇ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಹೊಂಡ ಆಳವಿಲ್ಲದೆ, ಸುತ್ತಮುತ್ತಲಿನ ಗಿಡಗಳು ಬೆಳದಿದ್ದ ಕಾರಣ ಮೊಸಳೆಗಳು ಮರೆಯಾಗಿರಬಹುದು ಎಂದು ತಿಳಿಸಿದ್ದಾರೆ. ಅವರು ರೈತರಿಗೆ ತಕ್ಷಣ ಮೊಸಳೆ ಕಂಡುಬಂದರೆ ಪೊಲೀಸರನ್ನು ಸಂಪರ್ಕಿಸಬೇಕು ಮತ್ತು ಯಾವುದೇ ಹಾನಿ ಮಾಡಬಾರದು ಎಂದು ಸೂಚಿಸಿದ್ದಾರೆ.







