ರಾಯಚೂರು | ಯುವಕನ ಕೊಲೆ ಆರೋಪ : ಜೆಡಿಎಸ್ ನಗರ ಘಟಕದ ಅಧ್ಯಕ್ಷ ಬಿ.ತಿಮ್ಮಾರೆಡ್ಡಿ ಸೇರಿ 6 ಮಂದಿ ವಿರುದ್ದ ಎಫ್‌ಐಆರ್ ದಾಖಲು

ರಾಯಚೂರು: ಯುವಕನೊರ್ವನಿಗೆ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಬಿ.ತಿಮ್ಮಾರೆಡ್ಡಿ ಹಾಗೂ ಅವರ ಬೆಂಬಲಿಗರು ಹಲ್ಲೆ ಮಾಡಿದ್ದರಿಂದ ಯುವಕನೊರ್ವ ಗಾಯಗೊಂಡು ಮೃತಪಟ್ಟಿರುವ ಆರೋಪ ಕೇಳಿ ಬಂದಿದ್ದು, ಈ ಕುರಿತು ಯುವಕನ ತಾಯಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮೃತ ಯುವಕನನ್ನು ಹರಿಜನವಾಡ ಬಡಾವಣೆಯ ದಶವಂತ (20) ಎನ್ನಲಾಗಿದೆ.
ಆತನ ತಾಯಿ ಗೋವಿಂದಮ್ಮ ಅ.6 ರಂದು ನೀಡಿದ ದೂರಿನ ಮೇರೆಗೆ ಇಲ್ಲಿನ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಬಿ.ತಿಮ್ಮಾರೆಡ್ಡಿ, ಸಂತೋಷ ರೆಡ್ಡಿ, ಅಖಿಲರೆಡ್ಡಿ, ಕೃಷ್ಣ ಸೇರಿ 6 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ :
ರಾಯಚೂರಿನ ಎಲ್ ಬಿಎಸ್ ನಗರ ಬಡಾವಣೆಯ ಪೋತಗಲ್ ಕ್ರಾಸ್ ಬಳಿ ಬಿ ತಿಮ್ಮಾರೆಡ್ಡಿ ಅವರಿಗೆ ಸೇರಿದ ಜಾಗದಲ್ಲಿ ಸೆ.27 ರಂದು ತಾಯಪ್ಪ(ದಶವಂತ) ನಿಂತು ಮೊಬೈಲ್ ನಲ್ಲಿ ಮಾತನಾಡುವಾಗ ಬಿ.ತಿಮ್ಮಾರೆಡ್ಡಿ ಹಾಗೂ ಅವರ ಬೆಂಬಲಿಗರು ಜಾತಿ ನಿಂದನೆ ಮಾಡಿ ತೀವ್ರ ಹಲ್ಲೆ ಮಾಡಿದ್ದರು, ಇದರಿಂದ ಬಲಗಣ್ಣಿಗೆ, ಹೊಟ್ಟೆಗೆ, ಬೆನ್ನಿಗೆ ತೀವ್ರ ಪೆಟ್ಟಾಗಿತ್ತು, ಗಾಯಗೊಂಡು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಆದರೆ, ಸೆ.28 ರಂದು ಚೇತರಿಸಿಕೊಳ್ಳದೇ ಮೃತಪಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
189(2), 191(2),54,115(2), 352,351(2)103(1) ಸಹಿತ ಬಿಎನ್ ಎಸ್ ಕಾಯ್ದೆ 2023, 190 ಎಸ್ ಸಿ ಎಸ್ ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.







