ದೇವದುರ್ಗ ಬಸ್ ನಿಲ್ದಾಣಕ್ಕೆ ಮಳೆ ನೀರು ನುಗ್ಗಿ ಸಾರ್ವಜನಿಕರ ಪರದಾಟ

ದೇವದುರ್ಗ : ಪಟ್ಟಣದಲ್ಲಿ ಸುರಿದ ಮಳೆಯಿಂದ ಬಸ್ ನಿಲ್ದಾಣದ ಮುಂದೆ ನೀರು ನಿಂತು ಚರಂಡಿ ಹಾಗೂ ರಾಜಕಾಲುವೆ ನೀರು ಬಸ್ ನಿಲ್ದಾಣದೊಳಗೆ ಪ್ರವೇಶಿಸುತ್ತಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ ಎಂದು ಚನ್ನಬಸವ ಬಿ.ಗಣೆಕಲ್ ಆರೋಪಿಸಿದರು.
ಮಳೆ ಬಂದಾಗಲೆಲ್ಲ ರಾಜಕಾಲುವೆಯ ನೀರು ಹಾಗೂ ತ್ಯಾಜ್ಯ ಬಸ್ ನಿಲ್ದಾಣದ ಒಳಗೆ ಬರುತ್ತಿದೆ. ಈ ಕುರಿತು ಹಲವಾರು ಬಾರಿ ಕಸ ತೆರವು ಹಾಗೂ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ವ್ಯವಸ್ಥಾಪಕರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಿದರು.
ಬಸ್ ನಿಲ್ದಾಣದ ಸುತ್ತಮುತ್ತ ಮಳೆ ನೀರು ಹಾಗೂ ಚರಂಡಿ ನೀರು ನಿಂತಿರುವುದರಿಂದ ತ್ಯಾಜ್ಯ ಹರಡಿ ದುರ್ವಾಸನೆ ಉಂಟಾಗುತ್ತಿದೆ. ಸಂಜೆ ವೇಳೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದ್ದು, ಪ್ರಯಾಣಿಕರು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು.
ಕೂಡಲೇ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿದು ಸಾರ್ವಜನಿಕರಿಗೆ ಸುಗಮವಾಗಿ ಓಡಾಡಲು ಅನುಕೂಲ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು.
Next Story




