ಉಜ್ವಲ ಕುಮಾರ್ ಘೋಷ್ ಅವರಿಂದ ಗಬ್ಬೂರು, ಮಸರಕಲ್ ಗ್ರಾಮದ ವಿವಿಧೆಡೆ ಭೇಟಿ, ಪರಿಶೀಲನೆ

ರಾಯಚೂರು, ಜೂನ್ 8: ಮಹತ್ವಕಾಂಕ್ಷಿ ಜಿಲ್ಲೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಕಡೆ ಪ್ರಯಾಣ ಬೆಳೆಸಿದ ಭಾರತ ಸರ್ಕಾರದ ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿಗಳು ಹಾಗೂ ಮಹತ್ವಕಾಂಕ್ಷಿ ಜಿಲ್ಲೆಯ ರಾಯಚೂರಿನ ಕೇಂದ್ರ ಪ್ರಭಾರಿ ಅಧಿಕಾರಿಗಳಾದ ಉಜ್ವಲ ಕುಮಾರ್ ಘೋಷ್ ಅವರು ಸೋಮವಾರ ಗಬ್ಬೂರಿನ ಅಂಗನವಾಡಿ ಕೇಂದ್ರ ಸಂಖ್ಯೆ 07ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಂಗನವಾಡಿಯ ಸುತ್ತಮುತ್ತಲಿನ ಪರಿಸರ, ಮಕ್ಕಳ ತರಗತಿ ಗೃಹ, ಅಡುಗೆ ಕೋಣೆ ಹಾಗೂ ದಾಸ್ತಾನು ಕೊಠಡಿಗಳಿಗೆ ತೆರಳಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕರಿಗೆ ಕಟ್ಟಡದ ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿ ಇಟ್ಟುಕೊಳ್ಳುವಂತೆ ಸೂಚನೆ ನೀಡಿದರು. ಇತ್ತೀಚಿನ ಮಳೆಯಿಂದಾಗಿ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆ ಇರುವುದರಿಂದ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು ಎಂದರು.
ಪ್ರಸಕ್ತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರ ಹಾಗೂ ಪೌಷ್ಟಿಕ ಉತ್ಪನ್ನಗಳ ಕುರಿತು ಮಾಹಿತಿ ಪಡೆದು, ಉತ್ತಮ ಗುಣಮಟ್ಟದ ಆಹಾರ ವಿತರಣೆಗೆ ಸೂಚನೆ ನೀಡಿದರು. ಮಕ್ಕಳಿಗೆ ನೀಡುತ್ತಿರುವ ಆಟಿಕೆ ವಸ್ತುಗಳನ್ನು ಖುದ್ದಾಗಿ ಪರಿಶೀಲಿಸಿದರು.
ನಂತರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಆಸ್ಪತ್ರೆಯ ಸ್ವಚ್ಛತೆ, ರೋಗಿಗಳಿಗೆ ನೀಡುವ ಚಿಕಿತ್ಸೆ ಹಾಗೂ ತುರ್ತು ಚಿಕಿತ್ಸಾ ಘಟಕವನ್ನು ವೀಕ್ಷಿಸಿದರು.
ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಸೂಚಿ ಮಾಡುವ ಕೊಠಡಿ, ವೈದ್ಯಾಧಿಕಾರಿಗಳ ಕೊಠಡಿ, ಪ್ರಯೋಗಾಲಯ ಹಾಗೂ ಮುಖ್ಯ ಔಷಧ ಉಗ್ರಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಶಾ ಕಾರ್ಯಕರ್ತೆಯರು ಗರ್ಭಿಣಿಯರಿಗೆ ಕಾಲಕಾಲಕ್ಕೆ ಲಸಿಕೆ ನೀಡುವಂತೆ ಕ್ರಮವಹಿಸಬೇಕು. ಸರ್ಕಾರದ ಸೌಲಭ್ಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಆಶಾ ಕಾರ್ಯಕರ್ತೆಯರ ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೂ ಮುನ್ನ ಗಬ್ಬೂರಿನ ನಾಡ ಕಚೇರಿಗೆ ಭೇಟಿ ನೀಡಿದ ಅವರು, ಬಳಿಕ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಶಕ್ತಿ ವೀಟಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೇಂದ್ರದ ಶೇಖರಣಾ ವಿಭಾಗ, ತಯಾರಿಕಾ ವಿಭಾಗ ಸೇರಿದಂತೆ ವಿವಿಧ ವಿಭಾಗಗಳನ್ನು ವೀಕ್ಷಿಸಿ, ಆಹಾರ ತಯಾರಿಕೆ ಯಂತ್ರಗಳ ಕುರಿತು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಡಾ. ಟಿ. ರೋಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಸುರೇಂದ್ರ ಬಾಬು, ದೇವದುರ್ಗ ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶರಣಮ್ಮ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ನಂದಿತಾ ಎಂ.ಎನ್., ದೇವದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ. ಬನದೇಶ್ವರ, ದೇವದುರ್ಗ ಸಿಡಿಪಿಒ ಮಹೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.






