ಜನರ ಸಮಸ್ಯೆಗೆ ಸ್ಪಂದಿಸದ ನಾವು ಕಳ್ಳರಂತೆ ಕಾಣುತ್ತಿದ್ದೇವೆ : ಶಾಸಕ ಶರಣುಗೌಡ ಕಂದಕೂರು

ರಾಯಚೂರು : ಕಲ್ಯಾಣ ಕರ್ನಾಟಕ ಭಾಗಕ್ಕೆ ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಮೂಲಸೌಕರ್ಯ ಒದಗಿಸುವಲ್ಲಿ ಸರ್ಕಾರದಿಂದ ಅನ್ಯಾಯವಾಗುತ್ತಿದ್ದರೂ, ವ್ಯವಸ್ಥೆಯೊಳಗೆ ಸಿಲುಕಿರುವ ಕಾರಣ ಶಾಸಕರಾಗಿ ತಾರತಮ್ಯದ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗುತ್ತಿಲ್ಲ ಎಂದು ಯಾದಗಿರಿಯ ಗುರುಮಠಕಲ್ ಕ್ಷೇತ್ರದ ಶಾಸಕ ಶರಣುಗೌಡ ಕಂದಕೂರ ಅಳಲು ತೋಡಿಕೊಂಡರು.
ರಾಯಚೂರು ನಗರದ ಎಸ್‌ಎಲ್‌ವಿ ಹೋಟೆಲ್‌ನ ಕೊಠಾರಿ ಫಂಕ್ಷನ್ ಹಾಲ್‌ನಲ್ಲಿ ಹೈದರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರ ಆಯೋಜಿಸಿದ್ದ ‘ದುಂಡು ಮೇಜಿನ ಸಭೆ ಮತ್ತು 371(ಜೆ) ಹೋರಾಟಗಾರರ ಸಮಾವೇಶ ಹಾಗೂ ಕಲ್ಯಾಣ ಕರ್ನಾಟಕ ವಿಕಾಸ ವೇದಿಕೆ ಸ್ಥಾಪನಾ ಸಮಾರಂಭ’ದಲ್ಲಿ ಅವರು ಮಾತನಾಡಿದರು.
ಆರಂಭದಲ್ಲಿ ಹಿಂದಿನ ಎಚ್‌ಕೆಆರ್‌ಡಿಬಿಯಿಂದ ಕೇವಲ 1 ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತಿತ್ತು. ಈಗಿನ ಕೆಕೆಆರ್‌ಡಿಬಿಯಿಂದ 5 ಸಾವಿರ ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತಿದ್ದರೂ ಭಾಗದ ಆರೋಗ್ಯ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ನಿರೀಕ್ಷಿತ ಮಟ್ಟದ ಸುಧಾರಣೆ ಕಂಡುಬಂದಿಲ್ಲ ಎಂದು ಹೇಳಿದರು.
ಶಾಲಾ ಕಟ್ಟಡ, ವಸತಿ ನಿಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ರಾಜ್ಯ ಸರ್ಕಾರವೇ ಪ್ರತ್ಯೇಕ ಅನುದಾನ ನೀಡಬೇಕಾಗಿತ್ತು. ಆದರೆ ಇವೆಲ್ಲವೂ ಕೆಕೆಆರ್‌ಡಿಬಿಯ ವಿಶೇಷ ಅನುದಾನದಿಂದಲೇ ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಕಡೆ ಶಾಸಕರ ಅನುದಾನ ಕಡಿತವಾಗುತ್ತಿದೆ. ಮತ್ತೊಂದೆಡೆ ಇರುವ ಅನುದಾನವನ್ನೂ ವೈಜ್ಞಾನಿಕವಾಗಿ ಬಳಸಲಾಗುತ್ತಿಲ್ಲ. ಸರ್ಕಾರವನ್ನು ಪ್ರಶ್ನಿಸಿದರೂ ಕಿಮ್ಮತ್ತಿಲ್ಲ. ಮತ ಹಾಕಿ ಗೆಲ್ಲಿಸಿದ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
“ಕ್ಷೇತ್ರದ ಮತದಾರರಿಗೆ ಮೋಸ ಮಾಡಿ ವಿಧಾನಸೌಧಕ್ಕೆ ನಾನು ಕಾಜು, ಕಿಶ್ಮಿಷ್ ತಿನ್ನಲು ಹೋಗಬೇಕಾ?” ಎಂದು ಪ್ರಶ್ನಿಸಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಜನರು ಹಾಗೂ ಸಂಘಟನೆಗಳೂ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
371 (ಜೆ) ಹೋರಾಟಗಾರರ ಸಮಾವೇಶ ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಹರವಿ ನಾಗನಗೌಡ, ಡಾ.ರಝಾಕ್ ಉಸ್ತಾದ್, ಭಾರದ್ವಾಜ್, ಅಲ್ಲಮಪ್ರಭು ಪಾಟೀಲ ಬೆಟ್ಟದೂರು, ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ, ಲಕ್ಷ್ಮಣ ದಸ್ತಿ, ಬಿ.ಬಸವರಾಜ, ಗುರುರಾಜ ಮತ್ತಿತರರು ಇದ್ದರು






