ಮರು ನಾಮಕರಣದ ವ್ಯರ್ಥ ಕಸರತ್ತು

ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಅಸ್ತಿತ್ವಕ್ಕೆ ಬಂದು ಹನ್ನೊಂದು ವರ್ಷಗಳಾದವು. ಈ ಒಂದು ದಶಕದಲ್ಲಿ ಜನರಿಗೆ ನೀಡಿರುವ ಯಾವ ಭರವಸೆಯನ್ನೂ ಈಡೇರಿಸಲು ಆಗಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ. ಭಾರತೀಯರೆಲ್ಲರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂ. ಬರಲಿಲ್ಲ. ಬದಲಾಗಿ ನೋಟು ಅಮಾನ್ಯ ಮಾಡಿ ಜನರನ್ನು ಮತ್ತಷ್ಟು ತೊಂದರೆಗೆ ಸಿಲುಕಿಸಲಾಯಿತು. ಹೊಸದಾಗಿ ಏನನ್ನು ಮಾಡಲಾಗದಿದ್ದರೂ ಹಾಲಿ ಇರುವ ಯೋಜನೆಗಳ ಹಾಗೂ ನಗರಗಳ, ಊರುಗಳ, ರಸ್ತೆಗಳ ಹೆಸರುಗಳನ್ನು ಬದಲಿಸುತ್ತಿರುವುದೇ ಈ ಸರಕಾರದ ಬಹುದೊಡ್ಡ ಸಾಧನೆಯಾಗಿದೆ.
ಹೆಸರುಗಳ ಬದಲಾವಣೆಯ ಚಾಳಿಗೆ ಈಗ ರಾಜ್ಯಪಾಲರುಗಳ ಅಧಿಕೃತ ನಿವಾಸಗಳೂ ಸೇರ್ಪಡೆಗೊಂಡಿವೆ. ಸ್ವಾತಂತ್ರ್ಯಾನಂತರ ಈವರೆಗೆ ಇದ್ದ ‘ರಾಜ ಭವನ’ ಎಂಬ ಹೆಸರನ್ನು ‘ಲೋಕ ಭವನ’ ಎಂದು ದಿಢೀರನೇ ಘೋಷಿಸಲಾಗಿದೆ. ಅಷ್ಟೇ ಅಲ್ಲ, ಇದನ್ನು ತಕ್ಷಣ ಜಾರಿಗೆ ತರಲಾಗಿದೆ. ಈ ಹೆಸರು ಬದಲಾವಣೆಯ ಬಗ್ಗೆ ರಾಜ್ಯ ಸರಕಾರದ ಜೊತೆಗೆ ಸಮಾಲೋಚಿಸಿಲ್ಲ, ಇದಕ್ಕೆ ನಮ್ಮ ಸರಕಾರದ ಒಪ್ಪಿಗೆಯಿಲ್ಲ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲರು ಹೇಳಿದ್ದಾರೆ. ರಾಜ್ಯಗಳ ಚುನಾಯಿತ ಸರಕಾರಗಳ ಜೊತೆಗೆ ಸಮಾಲೋಚನೆ ಮಾಡದೆ ಈ ರೀತಿ ಏಕಾಏಕಿ ಬದಲಿಸಲು ಹೊರಟಿದ್ದು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದ ನಿರಂಕುಶ ಸರ್ವಾಧಿಕಾರಿಗಳಿಂದ ಮಾತ್ರ ಸಾಧ್ಯ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಚುನಾಯಿತವಾದ ಸರಕಾರಕ್ಕೆ ಶೋಭೆ ತರುವುದಿಲ್ಲ.
ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ಈಗ ಎಲ್ಲ ರಾಜ್ಯಗಳಲ್ಲೂ ಹೆಸರು ಬದಲಿಸುವ ಹುಚ್ಚು ವ್ಯಾಪಿಸುತ್ತಿದೆ. ಮಾಡಲು ಕೆಲಸವಿಲ್ಲದ ರಾಜಕಾರಣಿಗಳು ತಮ್ಮ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಊರುಗಳ, ರಸ್ತೆಗಳ, ಬಸ್ ಮತ್ತು ರೈಲು ನಿಲ್ದಾಣಗಳ ಹೆಸರುಗಳನ್ನು ಬದಲಿಸಲು ಮುಂದಾಗಿದ್ದಾರೆ. ಎಲ್ಲ ಜಾತಿ, ಮತಗಳನ್ನು ಮೀರಿ ನಿಂತ ಮಹಾಪುರುಷರನ್ನು ಒಂದೊಂದು ಜಾತಿ, ಮತಕ್ಕೆ ಸೀಮಿತಗೊಳಿಸಿ ಅವರ ಹೆಸರುಗಳನ್ನು ಮನ ಬಂದಂತೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜನರು ಇವರನ್ನು ಚುನಾಯಿಸಿದ್ದು ಊರುಗಳ ಹೆಸರುಗಳನ್ನು ಬದಲಿಸಲು, ಮೂರ್ತಿ ಸ್ಥಾಪನೆಯನ್ನು ಮಾಡಲು ಅಲ್ಲ. ತಾವು ಚುನಾಯಿಸಿದ ಪ್ರತಿನಿಧಿಗಳು ತಮ್ಮ ಬದುಕಿನ, ಊರಿನ, ನಗರದ ಸಮಸ್ಯೆಗಳನ್ನು ಬಗೆ ಹರಿಸುತ್ತಾರೆ ಎಂಬ ನಂಬಿಕೆಯಿಂದ. ಆದರೆ ಅವರು ಮಾಡುತ್ತಿರುವುದು ನಿಷ್ಪ್ರಯೋಜಕ ಕೆಲಸಗಳನ್ನು.
ಈ ಚಾಳಿ ಮೊದಲು ಆರಂಭವಾಗಿದ್ದು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದಲ್ಲಿ ತಯಾರಾದ ರಾಜಕೀಯ ನಾಯಕರಿಂದ. ಅದೇ ಗರಡಿಯಿಂದ ಬಂದ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಎಷ್ಟೇ ಒತ್ತಡವಿದ್ದರೂ ಹೆಸರು ಬದಲಿಸುವ ವ್ಯರ್ಥ ಕಸರತ್ತಿಗೆ ಕೈ ಹಾಕಲಿಲ್ಲ. ಆದರೆ ಈಗ ಸ್ವಯಂ ಘೋಷಿತ ‘ವಿಶ್ವಗುರು’ ಗಳ ಕಾಲ. ಅವರ ಏಕೈಕ ಕಾರ್ಯಕ್ರಮವೆಂದರೆ ಹಳೆಯ ಹೆಸರು ಬದಲಿಸಿ ಹೊಸ ಹೆಸರನ್ನು ಇಡುವುದು. ಹೊಸದೇನನ್ನೂ ಮಾಡಲಾಗದವರು ಇಂಥ ಪ್ರಹಸನಕ್ಕೆ ಕೈ ಹಾಕುತ್ತಾರೆ. ಈಗಾಗಲೇ ಇರುವ ಹಿಂದಿನ ಸರಕಾರಗಳ ಹಲವಾರು ಯೋಜನೆಗಳಿಗೆ, ರೈಲುಗಳಿಗೆ, ರೈಲು ನಿಲ್ದಾಣಗಳಿಗೆ, ಬಸ್ ನಿಲ್ದಾಣಗಳಿಗೆ, ರಸ್ತೆಗಳಿಗೆ, ಶಾಲೆಗಳಿಗೆ ಇವರು ತಮ್ಮ ಸಂಘ ಪರಿವಾರದ ನಾಯಕರಾಗಿದ್ದ ದೀನ ದಯಾಳ್ ಉಪಾಧ್ಯಾಯ, ವಿನಾಯಕ ದಾಮೋದರ ಸಾವರ್ಕರ್ ಮೊದಲಾದವರ ಹೆಸರುಗಳನ್ನು ಇಟ್ಟಿದ್ದಾರೆ, ಇಡುತ್ತಿದ್ದಾರೆ. ದಿಲ್ಲಿಯ ಔರಂಗಜೇಬ್ ಮಾರ್ಗದ ಹೆಸರನ್ನು ಬದಲಿಸಿದರು. ಯೋಜನಾ ಆಯೋಗದ ಹೆಸರನ್ನು ‘ನೀತಿ ಆಯೋಗ’ ಎಂದು ಬದಲಿಸಿದರು. ವಿಶ್ವವಿದ್ಯಾನಿಲಯಗಳ ಧನ ಸಹಾಯ ಆಯೋಗದ ಹೆಸರನ್ನು ಬದಲಿಸಿದರು. ಈಗ ರಾಜ ಭವನಗಳ ಹೆಸರನ್ನು ಬದಲಿಸಲು ಹೊರಟಿದ್ದಾರೆ.
ಹೆಸರು ಬದಲಿಸುವ ಈ ಚಾಳಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಳಿದವರಿಗಿಂತ ಮುಂದಿದ್ದಾರೆ. ಹೀಗೆ ಮಾಡುವ ಮುನ್ನ ಜನರ ಅಭಿಪ್ರಾಯವನ್ನು ಕೇಳುವ ಸೌಜನ್ಯವೂ ಇವರಿಗಿಲ್ಲ. ಇವರು ಹೆಸರು ಬದಲಿಸಿದ ಮಾತ್ರಕ್ಕೆ ಜನರು ಅದನ್ನು ಒಪ್ಪುತ್ತಾರೆಂದಲ್ಲ, ಅವರು ರೂಢಿಯಂತೆ ಹಿಂದಿನ ಹೆಸರಿನಿಂದಲೇ ಕರೆಯುತ್ತಾರೆ. ಜಾತಿ ಮತದ ಆಧಾರದಲ್ಲಿ ಮಹಾಪುರುಷರನ್ನು ವಿಂಗಡಿಸುವುದು ಸಣ್ಣತನವಲ್ಲದೆ ಬೇರೇನೂ ಅಲ್ಲ. ಹೆಸರು ಬದಲಿಸಿದ ಮಾತ್ರಕ್ಕೆ ಜನರ ಬದುಕು ಹಸನಾಗುವುದಿಲ್ಲ.
ಒಂದೊಂದು ಹೆಸರಿನ ಹಿಂದೆ ಅದರದೇ ಆದ ಇತಿಹಾಸವಿರುತ್ತದೆ. ‘‘ಇತಿಹಾಸದ ಅರಿವಿಲ್ಲದವರು ಮಾತ್ರ ಹೆಸರು ಬದಲಿಸುವ ಕೃತ್ಯಕ್ಕೆ ಕೈ ಹಾಕುತ್ತಾರೆ’’ ಎಂದು ಹಿರಿಯ ಪತ್ರಕರ್ತರಾಗಿದ್ದ ಪಾಟೀಲ ಪುಟ್ಟಪ್ಪನವರು ಹೇಳುತ್ತಿದ್ದರು. ಇತಿಹಾಸವನ್ನು ಅಳಿಸಿ ಹಾಕಲು ಹೊರಡುವುದು ಅವಿವೇಕತನದ ಪರಮಾವಧಿಯಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ಕೆಲವು ವರ್ಷಗಳ ಹಿಂದೆ ಪಾಲಿಕೆಯ ಕಚೇರಿ ಹತ್ತಿರವಿರುವ ಹಡ್ಸನ್ ಸರ್ಕಲ್ ಹೆಸರನ್ನು ಬದಲಿಸಿ ಕಿತ್ತೂರು ರಾಣಿ ಚೆನ್ನಮ್ಮರ ಹೆಸರನ್ನು ಇಡಲಾಯಿತು. ಕಿತ್ತೂರು ರಾಣಿಯ ಹೋರಾಟದ ಕೆಚ್ಚಿನ ಬಗ್ಗೆ ಯಾರಲ್ಲೂ ಭಿನ್ನಾಭಿಪ್ರಾಯ ಇರಲು ಸಾಧ್ಯವಿಲ್ಲ. ಅವರ ಹೆಸರಿನ ಭವ್ಯ ಸ್ಮಾರಕವನ್ನು ನಿರ್ಮಿಸಲಿ, ಅಭ್ಯಂತರವಿಲ್ಲ. ಈಗಾಗಲೇ ಅವರ ಪ್ರತಿಮೆ ಟೌನ್‌ಹಾಲ್ ಪಕ್ಕದಲ್ಲಿ ಇದೆ. ಆದರೆ ಹಡ್ಸನ್ ಹೆಸರನ್ನು ತೆಗೆದು ಹಾಕಿ ಮರು ನಾಮಕರಣ ಮಾಡಬಾರದಿತ್ತು. ಕರ್ನಾಟಕಕ್ಕೆ ಅದರಲ್ಲೂ ಬೆಂಗಳೂರಿಗೆ ಬ್ರಿಟಿಷ್ ಅಧಿಕಾರಿ ಹಡ್ಸನ್ ನೀಡಿರುವ ಕೊಡುಗೆ ಅಪಾರವಾಗಿದೆ ಎಂಬುದನ್ನು ಮರೆಯಬಾರದು. ಉತ್ತರ ಕರ್ನಾಟಕದಲ್ಲಿ ಕನ್ನಡಕ್ಕಾಗಿ ಡೆಪ್ಯುಟಿ ಚೆನ್ನಬಸಪ್ಪನವರು ಮಾಡಿರುವ ಮಹತ್ಕಾರ್ಯವನ್ನು ಮೈಸೂರು ಸಂಸ್ಥಾನದಲ್ಲಿ ಹಡ್ಸನ್ ಮಾಡಿದರು. ಇಂಗ್ಲೆಂಡ್‌ನಿಂದ ಬೆಂಗಳೂರಿಗೆ ಬಂದಾಗ ಹಡ್ಸನ್‌ಗೆ ಒಂದೇ ಒಂದು ಕನ್ನಡ ಅಕ್ಷರವೂ ಗೊತ್ತಿರಲಿಲ್ಲ. ಆತ ಮೂವತ್ತು ದಿನಗಳಲ್ಲಿ ಕನ್ನಡ ಭಾಷೆಯನ್ನು ಕಲಿತು ದಾಖಲೆಯನ್ನು ನಿರ್ಮಿಸಿದರು. ರಾಜ್ಯದಲ್ಲಿ ಒಂದೇ ಒಂದು ಕನ್ನಡ ಶಾಲೆ ಇಲ್ಲದಿದ್ದಾಗ ತನ್ನ ಸಂಬಳದ ಹಣವನ್ನು ಉಳಿತಾಯ ಮಾಡಿ 73 ಕನ್ನಡ ಶಾಲೆಗಳನ್ನು ಆರಂಭಿಸಿದರು. ಇಂಥವರ ನೆನಪನ್ನು ಅಳಿಸಿ ಹಾಕಿರುವುದು ಸರಿಯಲ್ಲ. ಇದೇ ರೀತಿ ಕಬ್ಬನ್ ಪಾರ್ಕ್ ಹೆಸರನ್ನು ಬದಲಿಸುವ ಯತ್ನವೂ ನಡೆಯಿತು. ಇದು ಅವಿವೇಕವಲ್ಲದೆ ಬೇರೇನೂ ಅಲ್ಲ.
ನಾವು ಚುನಾಯಿಸಿದ ಸರಕಾರಗಳಿಗೆ ಮಾಡಲು ಸಾಕಷ್ಟು ಕೆಲಸಗಳಿವೆ.ಜನಸಾಮಾನ್ಯರನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಯೋಜನೆಗಳನ್ನು ರೂಪಿಸಿದರೆ ಜನ ಇವರನ್ನು ಎಂದೂ ಮರೆಯುವುದಿಲ್ಲ. ಈ ನೆಲದ ಜನರ ಭಾಷೆಯಾದ ಕನ್ನಡದ ಶಾಲೆಗಳು ಮುಚ್ಚಿ ಹೋಗುತ್ತಿವೆ, ಅವುಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಿ. ನಮ್ಮ ಸಂಸದರು ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರಬೇಕಾದ ಬಾಕಿ ಅನುದಾನವನ್ನು ತರಲು ಪ್ರಯತ್ನಿಸಲಿ. ಅದನ್ನು ಬಿಟ್ಟು ಇರುವ ಹೆಸರುಗಳನ್ನು ಬದಲಿಸಿ ಬೇರೆ ಹೆಸರು ಇಡುವ ಚಾಳಿಯನ್ನು ಕೈ ಬಿಡಲಿ.
ರೈಲು ನಿಲ್ದಾಣಗಳಿಗೂ ಆಯಾ ಊರಿನ ಹೆಸರು ಇರಲಿ.ಉದಾಹರಣೆಗೆ ಮಂಗಳೂರು ರೈಲು ನಿಲ್ದಾಣಕ್ಕೆ ಮಂಗಳೂರು ರೈಲು ನಿಲ್ದಾಣ ಅಂದರೆ ಸಾಕು.ಅದೇ ರೀತಿ ಇತರ ನಗರಗಳಲ್ಲಿ ಜನರು ಕರೆಯುತ್ತ ಬಂದ ಊರಿನ ನಗರದ ಹೆಸರು ಸಾಕು. ನೀವು ಹೊಸದೇನನ್ನಾದರೂ ಮಾಡಿದರೆ ನಿಮಗೆ ಬೇಕಾದ ಹೆಸರನ್ನು ಇಡಬಹುದು.







