ಹೊಸನಗರದ ಕುಂದಗಲ್ ಗ್ರಾಮದಲ್ಲಿ ಭೂಕುಸಿತ; ತೋಟ, ಮನೆ ಕಳೆದುಕೊಳ್ಳುವ ಆತಂಕದಲ್ಲಿ ನಿವಾಸಿಗಳು

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾದ್ಯಂತ ಧಾರಕಾರ ಮಳೆಯಾಗುತ್ತಿದ್ದು, ಹೊಸನಗರ ತಾಲೂಕಿನ ಕುಂದಗಲ್ ಗ್ರಾಮದಲ್ಲಿ ಭೂ ಕುಸಿತದ ಭೀತಿ ಉಂಟಾಗಿದೆ.
ಹೊಸನಗರ ತಾಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಧಾರಕಾರವಾಗಿ ಮಳೆ ಸುರಿಯುತ್ತಿದ್ದು, ಕುಂದಗಲ್ ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ಭೂ ಕುಸಿತವಾಗುತ್ತಿದೆ. ತೋಟ, ಮನೆ ಕಳೆದುಕೊಳ್ಳುವ ಆತಂಕ ಶುರುವಾಗಿದೆ.
ಈ ಹಿನ್ನೆಲೆಯಲ್ಲಿ ಕುಂದಗಲ್ ಹಾಗೂ ಬ್ರಾಹ್ಮಣವಾಡ ನಡುವೆ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧಿಸಲಾಗಿದೆ ಎಂದು ಫ್ಲೆಕ್ಸ್ ಹಾಕಿ ಸೂಚನೆ ನೀಡಲಾಗಿದೆ. ಜೊತೆಗೆ ಬ್ರಾಹ್ಮಣವಾಡ ಹಾಗೂ ಕುಂದಗಲ್ ನಡುವೆ ಸಂಚಾರ ಶಾಶ್ವತ ಬಂದ್ ಆಗಿದ್ದು, ಸ್ಥಳೀಯರು ಪಕ್ಕದ ಇನ್ನೊಂದು ಬೆಟ್ಟ ಏರಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಂದಗಲ್ ಪ್ರದೇಶದಲ್ಲಿರುವ ಸುಮಾರು 25 ಎಕರೆ ಅಡಿಕೆ ತೋಟ ಹಾಗೂ ಮನೆಗಳನ್ನು ಕಳೆದುಕೊಳ್ಳುವ ಆತಂಕದಲ್ಲಿ ಗ್ರಾಮಸ್ಥರು ದಿನದೂಡುತ್ತಿದ್ದಾರೆ. ಈ ನಡುವೆ, ಅಮೆರಿಕದಲ್ಲಿ ವಾಸವಾಗಿರುವ ಕುಂದಗಲ್ ಮೂಲದ ಪುಟ್ಟ ಬಾಲಕಿ ಅರ್ನಾ, ತನ್ನ ಅಜ್ಜಿಯ ಮನೆ ಮತ್ತು ಗ್ರಾಮವನ್ನು ಉಳಿಸುವಂತೆ ಮನವಿ ಮಾಡಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ.
‘ನಮ್ಮ ಅಜ್ಜ-ಅಜ್ಜಿಯರು ವಾಸಿಸುವ ಮನೆ ಹಾಗೂ ತೋಟಕ್ಕೆ ಭೂಕುಸಿತದ ಭೀತಿ ಎದುರಾಗಿದೆ. ಅದು ಕೇವಲ ಒಂದು ಕಟ್ಟಡವಲ್ಲ, ನನ್ನ ತಾಯಿಯ ಬಾಲ್ಯದ ನೆನಪುಗಳು, ನಮ್ಮ ಸಂಸ್ಕೃತಿಯ ಬೇರುಗಳು ಅಲ್ಲಿವೆ. ಆ ಮನೆಯನ್ನು ಉಳಿಸಿಕೊಡಿ ಪ್ಲೀಸ್’ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾಳೆ.
ಸ್ಥಳೀಯಾಡಳಿತ ಮತ್ತು ಜನಪ್ರತಿನಿಧಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಭೂಕುಸಿತ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಪರಿಸರ ತಜ್ಞರೂ ಈ ಪ್ರದೇಶಕ್ಕೆ ಭೇಟಿ ನೀಡಿ, ಭೂಕುಸಿತದ ಕಾರಣಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಒಂದು ಅಡಿಯಿಂದ ಶುರುವಾದ ಭೂ ಕುಸಿತ ಇಂದು ಸುಮಾರು 12 ಅಡಿಯಷ್ಟು ಆಳದಷ್ಟು ಕುಸಿದಿದೆ. ದಯವಿಟ್ಟು ನಮ್ಮಗೆ ರಕ್ಷಣೆ ನೀಡಿ. ಇಲ್ಲದಿದ್ದರೆ ಸೂಕ್ತ ಪರಿಹಾರ ನೀಡಿ ನಮ್ಮನ್ನು ಸ್ಥಳಾಂತರ ಮಾಡಬೇಕು.
ರಾಮಮೂರ್ತಿ, ಮನೆ ಮಾಲಕ, ಕುಂದಗಲ್
ಸದ್ಯಕ್ಕೆ ರಸ್ತೆಯಲ್ಲಿ ಓಡಾಡದಂತೆ ಹೊಸನಗರ ತಾಲೂಕು ಆಡಳಿತದಿಂದ ಬ್ಯಾನರ್ ಹಾಕಲಾಗಿದೆ. ಜೊತೆಗೆ ಗವರ್ನ್‌ಮೆಂಟ್ ಸರ್ವೇ ಆಫ್ ಇಂಡಿಯಾ ಅಧಿಕಾರಿಗಳು ಮನೆಗೆ ಹಾನಿಯಾಗುವುದಿಲ್ಲ ಎಂದು ಮನೆ ಮಾಲಕರಿಗೆ ಭರವಸೆ ನೀಡಿದ್ದಾರೆ. ನಾನು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ.
ರಶ್ಮಿ ಹಾಲೇಶ್, ಹೊಸನಗರ ತಹಶೀಲ್ದಾರ್







