ಫುಟ್ಬಾಲ್ ನಿಂದ ನಿವೃತ್ತರಾದ ಸುನೀಲ್ ಚೆಟ್ರಿಗೆ ಸನ್ಮಾನ

ಕೋಲ್ಕತ : ಭಾರತ ಮತ್ತು ಕುವೈತ್ ನಡುವಿನ ಫಿಫಾ ವಿಶ್ವಕಪ್ 2026ರ ಅರ್ಹತಾ ಪಂದ್ಯವು ಗುರುವಾರ ಗೋಲುರಹಿತ ಡ್ರಾದಲ್ಲಿ ಮುಕ್ತಾಯಗೊಂಡಿದೆ. ಕೋಲ್ಕತದ ಸಾಲ್ಟ್ ಲೇಕ್ ಸ್ಟೇಡಿಯಮ್‌ನಲ್ಲಿ ನಡೆದ ಆ ಪಂದ್ಯವು ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿಯ ಅಂತರ್‌ರಾಷ್ಟ್ರೀಯ ವಿದಾಯ ಪಂದ್ಯವಾಗಿತ್ತು.
ಅಂತರ್‌ರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತರಾದ ಚೆಟ್ರಿಯನ್ನು ಬಳಿಕ ಸನ್ಮಾನಿಸಲಾಯಿತು. ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಸೇರಿದಂತೆ ಭಾರತೀಯ ಫುಟ್ಬಾಲ್ ಕ್ಷೇತ್ರದ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್, ಚೆಟ್ರಿಗೆ ಚಿನ್ನದ ಸರ ಪ್ರದಾನ ಮಾಡಿದರು. ಬಳಿಕ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಮತ್ತು ಕೋಲ್ಕತದ ಮೂರು ದೊಡ್ಡ ಫುಟ್ಬಾಲ್ ಕ್ಲಬ್‌ಗಳಾದ ಈಸ್ಟ್ ಬೆಂಗಾಲ್, ಮೋಹನ್ ಬಾಗನ್ ಮತ್ತು ಮುಹಮ್ಮದನ್ ಸ್ಪೋರ್ಟ್ಸ್ ಕ್ಲಬ್‌ಗಳು ಚೆಟ್ರಿಗೆ ಸ್ಮರಣಿಕೆಗಳನ್ನು ನೀಡಿದವು.
ಚೆಟ್ರಿ ತನ್ನ ವೃತ್ತಿಪರ ಫುಟ್ಬಾಲ್ ಬದುಕನ್ನು 22 ವರ್ಷಗಳ ಹಿಂದೆ ಕೋಲ್ಕತದಲ್ಲಿ ಆರಂಭಿಸಿದ್ದರು. ಅವರು ಮೊದಲು ಆಡಿದ್ದು ಮರೀನರ್ಸ್ ಕ್ಲಬ್ ಪರವಾಗಿ. ಬಳಿಕ ಸ್ವಲ್ಪ ಸಮಯ ಈಸ್ಟ್ ಬೆಂಗಾಲ್ ಪರವಾಗಿಯೂ ಆಡಿದರು.
ಅಂತಿಮವಾಗಿ ಅದೇ ನಗರದಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡಿದರು. ಅವರು ಕಣ್ಣೀರಿನೊಂದಿಗೆ ಫುಟ್ಬಾಲ್‌ಗೆ ವಿದಾಯ ಕೋರಿದರು.







