ಶ್ರೀಲಂಕಾ ವಿರುದ್ಧ ಏಕದಿನ ಸರಣಿ | ಭಾರತ ಕ್ರಿಕೆಟ್ ತಂಡಕ್ಕೆ ಶ್ರೇಯಸ್ ಅಯ್ಯರ್ ಪುನರಾಗಮನ?

ಶ್ರೇಯಸ್ ಅಯ್ಯರ್ | PC : NDTV
ಹೊಸದಿಲ್ಲಿ : ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗುವ ನಿರೀಕ್ಷೆ ಇದ್ದು, ಐಪಿಎಲ್ ಚಾಂಪಿಯನ್ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಜುಲೈ-ಆಗಸ್ಟ್ನಲ್ಲಿ ಶ್ರೀಲಂಕಾ ವಿರುದ್ಧ ನಡೆಯುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ಪುನರಾಗಮನವಾಗುವ ಸಾಧ್ಯತೆಯಿದೆ.
ಐಪಿಎಲ್ನಲ್ಲಿ ಕೆಕೆಆರ್ ತಂಡ ಪ್ರಶಸ್ತಿ ಗೆಲ್ಲುವಲ್ಲಿ ನಾಯಕತ್ವವಹಿಸಿದ್ದ ಅಯ್ಯರ್ ಜುಲೈ 5ರಿಂದ ಝಿಂಬಾಬ್ವೆ ವಿರುದ್ಧ ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವಾಪಸಾಗುವ ನಿರೀಕ್ಷೆ ಇದೆ.
ಜುಲೈ-ಆಗಸ್ಟ್ನಲ್ಲಿ ಶ್ರೀಲಂಕಾ ವಿರುದ್ಧ ನಡೆಯುವ ಏಕದಿನ ಸರಣಿಯು ಅಯ್ಯರ್ಗೆ ತಂಡಕ್ಕೆ ವಾಪಸಾಗಲು ಇರುವ ಉತ್ತಮ ಅವಕಾಶವಾಗಿದೆ.
ಐಪಿಎಲ್ನಲ್ಲಿ ಕೆಕೆಆರ್ನ ಗೆಲುವಿನ ಅಭಿಯಾನಕ್ಕೆ ಗಂಭೀರ್ ಹಾಗೂ ಅಯ್ಯರ್ ಅವರ ಯಶಸ್ವಿ ಜೊತೆಗಾರಿಕೆ ಕಾರಣವಾಗಿದೆ. ಮುಂಬೈನ ಪ್ರತಿಭಾವಂತ ಆಟಗಾರ ಅಯ್ಯರ್ ಮುಂಬರುವ ದಿನಗಳಲ್ಲಿ ತನ್ನ ಅದೃಷ್ಟ ಬದಲಾಗುವ ವಿಶ್ವಾಸದಲ್ಲಿದ್ದಾರೆ.
ರಣಜಿ ಟ್ರೋಫಿಯಲ್ಲಿ ಆಡಲು ಹಿಂದೇಟು ಹಾಕಿದ್ದ ಅಯ್ಯರ್ ಹಾಗೂ ಇಶಾನ್ ಕಿಶನ್ರನ್ನು ಬಿಸಿಸಿಐನ ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿತ್ತು. ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳುತ್ತಿದ್ದ ಅಯ್ಯರ್ ರಣಜಿ ಫೈನಲ್ನಲ್ಲಿ ಆಡಿ 90 ರನ್ ಗಳಿಸಿದ್ದರು.
ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಯುವ ಆಟಗಾರರು ಸದ್ಯ ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ನಡೆಸುತ್ತಿದ್ದಾರೆ. ಮುಂದಿನ ವಾರ ಆರಂಭವಾಗಲಿರುವ ಝಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನಾಡಲು ಸಜ್ಜಾಗುತ್ತಿದ್ದಾರೆ.
ಶ್ರೇಯಸ್ ಅಯ್ಯರ್ ಸದ್ಯಕ್ಕೆ ಎನ್ಸಿಎನಲ್ಲಿಲ್ಲ. ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ಮಯಾಂಕ್ ಯಾದವ್, ಹರ್ಷಿತ್ ರಾಣಾ, ನಿತಿಶ್ ರೆಡ್ಡಿ, ವಿಜಯಕುಮಾರ್ ವೈಶಾಕ್, ಯಶ್ ದಯಾಳ್ ಶಿಬಿರದಲ್ಲಿದ್ದಾರೆ. ಕೆಲವರು ಟಿ20 ಪಂದ್ಯ ಆಡಲು ಝಿಂಬಾಬ್ವೆಗೆ ತೆರಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.







