ಫಿಫಾ ರ್ಯಾಂಕಿಂಗ್ಸ್ನಲ್ಲಿ ಮತ್ತಷ್ಟು ಕುಸಿತ ಕಂಡ ಭಾರತ

PC : olympics.com
ಚೆನ್ನೈ : ಇತ್ತೀಚಿನ ಫಿಫಾ ರ್ಯಾಂಕಿಂಗ್ಸ್ನಲ್ಲಿ ಭಾರತೀಯ ಪುರುಷರ ಫುಟ್ಬಾಲ್ ತಂಡವು ಮತ್ತಷ್ಟು ಕೆಳಕ್ಕೆ ಇಳಿದಿದೆ. ಗುರುವಾರ ಬಿಡುಗಡೆಗೊಳಿಸಲಾಗಿರುವ ಹೊಸ ರ್ಯಾಂಕಿಂಗ್ಸ್ನಲ್ಲಿ ‘ಬ್ಲೂ ಟೈಗರ್ಸ್’ ಮೂರು ಸ್ಥಾನಗಳನ್ನು ಕಳೆದುಕೊಂಡು 124ನೇ ಸ್ಥಾನಕ್ಕೆ ಇಳಿದಿದೆ.
ಇದು 2017 ಮಾರ್ಚ್ 9ರ ಬಳಿಕ ಭಾರತದ ನಿಕೃಷ್ಟ ರ್ಯಾಂಕಿಂಗ್ ಆಗಿದೆ. ಅಂದು ಭಾರತದ ರ್ಯಾಂಕಿಂಗ್ 132 ಆಗಿತ್ತು.
ಫಿಫಾ ವಿಶ್ವಕಪ್ 2026 ಅರ್ಹತಾ ಸುತ್ತುಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಭಾರತದ ಸ್ಥಾನದಲ್ಲಿ ಕುಸಿತ ಸಂಭವಿಸಿದೆ. ಅರ್ಹತಾ ಸುತ್ತುಗಳಲ್ಲಿ ಖತರ್ ಮತ್ತು ಅಫ್ಘಾನಿಸ್ತಾನಗಳ ವಿರುದ್ಧ ಸೋಲನುಭವಿಸಿದ ಬಳಿಕ, ಮೂರನೇ ಸುತ್ತಿಗೆ ತೇರ್ಗಡೆಗೊಳ್ಳಲು ಭಾರತ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನ ಕೋಚ್ ಐಗರ್ ಸ್ಟೈಮ್ಯಾಕ್ರನ್ನು ಅವರ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.
ಸ್ಟೈಮ್ಯಾಕ್ 2019ರಲ್ಲಿ ಭಾರತೀಯ ಫುಟ್ಬಾಲ್ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದರು. ಅವರು ಐದು ವರ್ಷಗಳ ಅವಧಿಯಲ್ಲಿ ಎರಡು ಎಸ್ಎಎಫ್ಎಫ್ ಚಾಂಪಿಯನ್ಶಿಪ್ಗಳು, ಒಂದು ಇಂಟರ್ಕಾಂಟಿನೆಂಟಲ್ ಕಪ್ ಮತ್ತು ಒಂದು ತ್ರಿಕೋನ ಸರಣಿ ಸೇರಿದಂತೆ ನಾಲ್ಕು ಪ್ರಶಸ್ತಿಗಳನ್ನು ಎತ್ತಲು ಭಾರತೀಯ ತಂಡಕ್ಕೆ ಸಹಾಯ ಮಾಡಿದ್ದರು. ಇದರ ಪರಿಣಾಮವಾಗಿ, ಕಳೆದ ವರ್ಷದ ಜುಲೈಯಲ್ಲಿ ಭಾರತವು ರ್ಯಾಂಕಿಂಗ್ನಲ್ಲಿ ಅಗ್ರ 100ರಲ್ಲಿ ಸ್ಥಾನ ಪಡೆದಿತ್ತು.
ಆದರೆ, ಆ ಬಳಿಕ ತಂಡದ ನಿರ್ವಹಣೆ ಕುಸಿದಿದೆ. ಅದು ಈ ಅವಧಿಯಲಿ ತಾನಾಡಿದ 12 ಪಂದ್ಯಗಳ ಪೈಕಿ ಒಂಭತ್ತರಲ್ಲಿ ಸೋಲು ಕಂಡಿದೆ. ಇದರಲ್ಲಿ ಎಎಫ್ಸಿ ಏಶ್ಯನ್ ಕಪ್ನ ಕಳಪೆ ನಿರ್ವಹಣೆಯೂ ಸೇರಿದೆ. ಏಶ್ಯನ್ ಕಪ್ನಲ್ಲಿ ಅದು ತನ್ನ ಗುಂಪು ಹಂತದ ಎಲ್ಲಾ ಮೂರು ಪಂದ್ಯಗಳಲ್ಲಿ ಒಂದೇ ಒಂದು ಗೋಲು ದಾಖಲಿಸದೆ ಸೋಲನುಭವಿಸಿದೆ.







