ದುಲೀಪ್ ಟ್ರೋಫಿ: ದ್ವಿಶತಕ ವಂಚಿತ ಜಗದೀಶನ್

ಜಗದೀಶನ್ | PC : PTI
ಬೆಂಗಳೂರು, ಸೆ.5: ಎಡಗೈ ಸ್ಪಿನ್ನರ್ ನಿಶಾಂತ್ ಸಿಧು (5-125)ಕೆಳ ಕ್ರಮಾಂಕದಲ್ಲಿ ಐದು ವಿಕೆಟ್ಗಳನ್ನು ಉರುಳಿಸಿದ ಪರಿಣಾಮ ದಕ್ಷಿಣ ವಲಯ ತಂಡವು ಉತ್ತರ ವಲಯದ ವಿರುದ್ಧದ ದುಲೀಪ್ ಟ್ರೋಫಿಯ ಮೊದಲ ಸೆಮಿ ಫೈನಲ್ ನಲ್ಲಿ 536 ರನ್ ಗಳಿಸಿ ಆಲೌಟಾಯಿತು.
3 ವಿಕೆಟ್ಗಳ ನಷ್ಟಕ್ಕೆ 297 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ದಕ್ಷಿಣ ವಲಯ ತಂಡವು 2ನೇ ದಿನವಾದ ಶುಕ್ರವಾರ ರಿಕಿ ಭುಯ್(54 ರನ್, 131 ಎಸೆತ)ಹಾಗೂ ತನಯ್ ತ್ಯಾಗರಾಜನ್(58 ರನ್, 116 ಎಸೆತ)ಕ್ರಮವಾಗಿ 6ನೇ ಹಾಗೂ 8ನೇ ಕ್ರಮಾಂಕದಲ್ಲಿ ಗಳಿಸಿದ ಅರ್ಧಶತಕಗಳ ನೆರವಿನಿಂದ ಇನ್ನೂ 239 ರನ್ ಸೇರಿಸಿತು.
ಭೋಜನ ವಿರಾಮಕ್ಕೆ ಮೊದಲು 352 ಎಸೆತಗಳಲ್ಲಿ 16 ಬೌಂಡರಿ, 2 ಸಿಕ್ಸರ್ ನೆರವಿನಿಂದ 197 ರನ್ ಗಳಿಸಿ ರನೌಟಾದ ಆರಂಭಿಕ ಬ್ಯಾಟರ್ ಎನ್. ಜಗದೀಶನ್ ಕೇವಲ 3 ರನ್ನಿಂದ ದ್ವಿಶತಕ ವಂಚಿತರಾದರು.
ಉತ್ತರ ವಲಯದ ಪರ ನಿಶಾಂತ್ ಯಶಸ್ವಿ ಪ್ರದರ್ಶನ ನೀಡಿದರೆ, ಅಂಶುಲ್ ಕಾಂಬೋಜ್(2-67) ಎರಡು ವಿಕೆಟ್ ಪಡೆದರು.
* ಪಶ್ಚಿಮ ವಲಯ 438 ರನ್ಗೆ ಆಲೌಟ್
ಮತ್ತೊಂದು ಸೆಮಿ ಫೈನಲ್ ನಲ್ಲಿ ನಿನ್ನೆಯ ಮೊತ್ತಕ್ಕೆ 75 ರನ್ ಸೇರಿಸಿದ ಪಶ್ಚಿಮ ವಲಯ ತಂಡ ಕೇಂದ್ರ ವಲಯದ ವಿರುದ್ದ ತನ್ನ ಮೊದಲ ಇನಿಂಗ್ಸ್ನಲ್ಲಿ 438 ರನ್ ಗಳಿಸಿ ಆಲೌಟಾಯಿತು. ತನುಷ್ ಕೋಟ್ಯಾನ್(76 ರನ್)ಹಾಗೂ ಶಾರ್ದುಲ್ ಠಾಕೂರ್(64 ರನ್)ಶಕತದಿಂದ ವಂಚಿತರಾದರು.
ಸ್ಪಿನ್ನರ್ಗಳಾದ ಸಾರಾಂಶ್ ಜೈನ್(3-121) ಹಾಗೂ ಹರ್ಷ ದುಬೆ (3-118)ತಲಾ 3 ವಿಕೆಟ್ಗಳನ್ನು ಪಡೆದರು.
ಕೇಂದ್ರ ವಲಯ 2ನೇ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿದೆ. ಶುಭಂ ಶರ್ಮಾ(ಔಟಾಗದೆ 60)ಹಾಗೂ ರಜತ್ ಪಾಟಿದಾರ್(ಔಟಾಗದೆ 47)ಕ್ರೀಸ್ ಕಾಯ್ದುಕೊಂಡಿದ್ದಾರೆ. ಆರಂಭಿಕ ಆಟಗಾರ ದಾನಿಶ್ ಮಾಲೆವರ್ 76 ರನ್ ಗಳಿಸಿದ್ದು ಆಯುಷ್ ಪಾಂಡೆ(40 ರನ್)ಜೊತೆ ಮೊದಲ ವಿಕೆಟ್ಗೆ 67 ರನ್ ಸೇರಿಸಿದರು.







