ಟೆಸ್ಟ್ ಕ್ರಿಕೆಟ್ನಲ್ಲಿ 13 ವರ್ಷಗಳನ್ನು ಪೂರೈಸಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ | PTI
ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ತಂಡ ಟಿ-20 ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಗುರುವಾರ ತನ್ನ ಮೊದಲ ಸೂಪರ್-8 ಪಂದ್ಯವನ್ನು ಆಡಲು ಸದ್ಯ ಬಾರ್ಬಡೋಸ್ನ ಬ್ರಿಡ್ಜ್ಟೌನ್ನಲ್ಲಿದೆ. ಬಾರ್ಬಡೋಸ್ನಿಂದ 1976 ಕಿ.ಮೀ. ದೂರದಲ್ಲಿರುವ ಜಮೈಕಾದಲ್ಲಿ 13 ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಅವರು ತನ್ನ ಟೆಸ್ಟ್ ಕ್ರಿಕೆಟ್ ಪಯಣ ಆರಂಭಿಸಿದ್ದರು.
ಭಾರತವು 2011ರಲ್ಲಿ ವೆಸ್ಟ್ಇಂಡೀಸ್ಗೆ ಪ್ರವಾಸಕೈಗೊಂಡಿದ್ದಾಗ ಜಮೈಕಾದ ಕಿಂಗ್ಸ್ಟನ್ನ ಸಬಿನಾ ಪಾರ್ಕ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ವಿಂಡೀಸ್ ತಂಡವನ್ನು ಎದುರಿಸಿದ್ದರು. ಎಪ್ರಿಲ್ನಲ್ಲಿ ಏಕದಿನ ವಿಶ್ವಕಪ್ ಎತ್ತಿಹಿಡಿದಿದ್ದ ವಿರಾಟ್ ಕೊಹ್ಲಿಗೆ ಟೆಸ್ಟ್ ಕ್ಯಾಪನ್ನು ನೀಡಲಾಗಿತ್ತು. ಆಗ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಭಾರತವನ್ನು ಪ್ರತಿನಿಧಿಸಿದ 268ನೇ ಕ್ರಿಕೆಟಿಗ ಎನಿಸಿಕೊಂಡಿದ್ದರು.
ಭಾರತ ಆ ಪಂದ್ಯವನ್ನು 63 ರನ್ನಿಂದ ಗೆದ್ದುಕೊಂಡಿತ್ತು. ಕೊಹ್ಲಿ ಎರಡೂ ಇನಿಂಗ್ಸ್ಗಳಲ್ಲಿ 4 ಹಾಗೂ 15 ರನ್ ಗಳಿಸಿದ್ದರು.
ಟೆಸ್ಟ್ ಕ್ರಿಕೆಟ್ನಲ್ಲಿ ನೀರಸ ಆರಂಭ ಪಡೆದಿದ್ದ ಕೊಹ್ಲಿ ಅ ನಂತರ ಟೆಸ್ಟ್ ಕ್ರಿಕೆಟ್ನ ಓರ್ವ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದರು. ಇದೀಗ ಟೆಸ್ಟ್ ಕ್ರಿಕೆಟ್ನಲ್ಲಿ 13 ವರ್ಷಗಳನ್ನು ಪೂರೈಸಿರುವ ಕೊಹ್ಲಿ ಅವರು 113 ಟೆಸ್ಟ್ ಪಂದ್ಯಗಳಲ್ಲಿ 8,848 ರನ್ ಗಳಿಸಿದ್ದು ಔಟಾಗದೆ 254 ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ. ಇದರಲ್ಲಿ 29 ಶತಕಗಳು ಹಾಗೂ 7 ದ್ವಿಶತಕಗಳಿವೆ.
ವಿರಾಟ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಸಚಿನ್ ತೆಂಡುಲ್ಕರ್(15,921 ರನ್), ರಾಹುಲ್ ದ್ರಾವಿಡ್(13,265 ರನ್) ಹಾಗೂ ಸುನೀಲ್ ಗವಾಸ್ಕರ್(10,122 ರನ್)ನಂತರ ಭಾರತದ ನಾಲ್ಕನೇ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ.
2014ರಲ್ಲಿ ಎಂ.ಎಸ್.ಧೋನಿಯವರಿಂದ ನಾಯಕತ್ವವಹಿಸಿಕೊಂಡ ವಿರಾಟ್ 2018-19ರಲ್ಲಿ 71 ವರ್ಷಗಳ ನಂತರ ಭಾರತವು ಆಸ್ಟ್ರೇಲಿಯದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಜಯಿಸಲು ನೆರವಾಗಿದ್ದರು.
ವಿರಾಟ್ ನಾಯಕತ್ವದಲ್ಲಿ ಭಾರತವು ಆಸ್ಟ್ರೇಲಿಯ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ವೆಸ್ಟ್ಇಂಡೀಸ್ನಲ್ಲಿ ಟೆಸ್ಟ್ ಪಂದ್ಯಗಳನ್ನು ಜಯಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ತಲುಪಿತ್ತು.
ವಿರಾಟ್ 2022ರ ಜನವರಿಯಲ್ಲಿ ಟೆಸ್ಟ್ ನಾಯಕತ್ವ ತ್ಯಜಿಸಿದ್ದರು. ರೋಹಿತ್ ಶರ್ಮಾಗೆ ನಾಯಕತ್ವ ಹಸ್ತಾಂತರಿಸಿದ್ದರು.







