ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುವ 14 ವರ್ಷದ ಈಜುಗಾರ್ತಿ

ದಿನಿದಿ | PC : PTI
ಬೆಂಗಳೂರು : ಹದಿನಾಲ್ಕು ವರ್ಷದ ದಿನಿದಿ ದೇಸಿಂಗು ಪ್ಯಾರಿಸ್ ಒಲಿಂಪಿಕ್ಸ್ ನ ಸಿದ್ಧತೆಯಲ್ಲಿದ್ದಾರೆ. ಈ ತಿಂಗಳ ಉತ್ತರಾರ್ಧದಲ್ಲಿ ಆರಂಭಗೊಳ್ಳುವ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವ ಭಾರತೀಯ ತಂಡದಲ್ಲಿ ಅವರು ಸ್ಥಾನ ಪಡೆದಿದ್ದಾರೆ.
‘‘ನನ್ನ ವಯಸ್ಸಿನ ಮಕ್ಕಳು ಸಾಮಾನ್ಯವಾಗಿ ಪಾಲ್ಗೊಳ್ಳುವ ಚಟುವಟಿಕೆಗಳನ್ನು ನಾನು ಕೆಲವು ಸಲ ತಪ್ಪಿಸಿಕೊಂಡಿದ್ದೇನೆ. ನಾನು ಸ್ನೇಹಿತರೊಂದಿಗೆ ಹೆಚ್ಚಾಗಿ ಹೊರಗೆ ಹೋಗುವುದಿಲ್ಲ. ಆಗ ನನಗೆ ಏಕಾಂಗಿ ಅನಿಸುತ್ತದೆ. ಆಗ ನಾನು ಈಜಲು ಆರಂಭಿಸಿದೆ ಮತ್ತು ಒಲಿಂಪಿಕ್ಸ್ ಗೆ ಹೋಗುವ ಕನಸು ಕಂಡೆ’’ ಎಂದು ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ದಿನಿದಿ ಹೇಳಿದರು. ‘‘ನನ್ನ ದಾರಿಯನ್ನು ನಾನೇ ಆಯ್ಕೆ ಮಾಡಿಕೊಂಡೆ. ಈ ದಾರಿಯಲ್ಲಿ ಹಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಆದರೆ, ನಾನು ಭಿನ್ನ ಮತ್ತು ಅಸಾಧಾರಣ ಎಂಬ ಭಾವನೆ ನನ್ನಲ್ಲಿದೆ. ಹದಿನಾಲ್ಕರ ಹರೆಯದಲ್ಲಿ ನಾನು ಒಲಿಂಪಿಕ್ಸ್ ಗೆ ಹೋಗುತ್ತಿದ್ದೇನೆ. ಹಾಗಾಗಿ, ನಾನು ಮಾಡಿದ ಎಲ್ಲಾ ತ್ಯಾಗಗಳಿಗೆ ಬೆಲೆ ಬಂದಿದೆ’’ ಎಂದು ದಿನಿದಿ ಹೇಳಿದರು.
ಬೆಂಗಳೂರಿನ ದಿನಿದಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಭಾರತೀಯ ಈಜು ತಂಡದ ಅತಿ ಕಿರಿಯ ಸದಸ್ಯೆ ಆಗಿದ್ದಾರೆ.
ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿರುವ ದಿನಿದಿ ಭಾರತೀಯ ಈಜು ರಂಗದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಅವರು ಕಳೆದ ವರ್ಷ ನಡೆದ ನ್ಯಾಶನಲ್ ಗೇಮ್ಸ್ ಮತ್ತು ಸೀನಿಯರ್ ನ್ಯಾಶನಲ್ ಚಾಂಪಿಯನ್ಶಿಪ್ಸ್ ನಲ್ಲಿ ಪದಕಗಳನ್ನು ಗೆದ್ದಿದ್ದಾರೆ. ಅವರು ಹಾಲಿ ಋತುವಿನಲ್ಲಿ ಅಗ್ರ ಶ್ರೇಣಿಯ ಮಹಿಳಾ ಈಜುಪಟು ಆಗಿದ್ದಾರೆ.
ಅವರ ಸಾಮರ್ಥ್ಯವನ್ನು ಗುರುತಿಸಿ ಭಾರತೀಯ ಈಜು ಫೆಡರೇಶನ್ ಅವರಿಗೆ ಎರಡು ಯುನಿವರ್ಸಾಲಿಟಿ ಸ್ಥಾನಗಳ ಪೈಕಿ ಒಂದನ್ನು ನೀಡಿದೆ.







