ಪ್ಯಾರಿಸ್ ಒಲಿಂಪಿಕ್ಸ್: ಆಲ್ಡ್ರಿನ್, ಅಂಕಿತಾ ಅರ್ಹತೆ, ಭಾರತದ ಅತ್ಲೆಟಿಕ್ಸ್ ತಂಡದ ಬಲ 30ಕ್ಕೇರಿಕೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಲಾಂಗ್ಜಂಪ್ ಪಟು ಜೆಸ್ವಿನ್ ಆಲ್ಡ್ರಿನ್ ಹಾಗೂ 5,000 ಮೀ. ಓಟಗಾರ್ತಿ ಅಂಕಿತಾ ಧ್ಯಾನಿ ಅವರು ವರ್ಲ್ಡ್ ರ್ಯಾಂಕಿಂಗ್ ಕೋಟಾದ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ಗೆಅರ್ಹತೆ ಪಡೆದಿದ್ದಾರೆ. ಈ ಮೂಲಕ ಇಬ್ಬರು ಅತ್ಲೀಟ್ ಗಳು ಭಾರತೀಯ ಅತ್ಲೆಟಿಕ್ಸ್ ತಂಡ ಸೇರಲು ಸಜ್ಜಾಗಿದ್ದು, ಇದೀಗ ತಂಡದ ಸದಸ್ಯರ ಬಲ 30ಕ್ಕೇರಿದೆ.
ಅರ್ಹತೆ ಪಡೆದಿದ್ದರೂ ವಿವಿಧ ಕಾರಣಗಳಿಂದಾಗಿ ನಮ್ಮ ಕ್ರೀಡಾಪಟುಗಳು ಪ್ಯಾರಿಸ್ನಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಅಂತರ್ರಾಷ್ಟ್ರೀಯ ಅತ್ಲೆಟಿಕ್ಸ್ ಮಂಡಳಿಗೆ ರಾಷ್ಟ್ರೀಯ ಅತ್ಲೆಟಿಕ್ಸ್ ಫೆಡರೇಶನ್ ತಿಳಿಸಿದ ನಂತರ ಆಲ್ಡ್ರಿನ್ ಹಾಗೂ ಅಂಕಿತಾರ ಹೆಸರುಗಳನ್ನು ವಿಶ್ವ ಅತ್ಲೆಟಿಕ್ಸ್ ಇತ್ತೀಚೆಗಿನ ಪಟ್ಟಿಯಲ್ಲಿ ಪ್ರಕಟಿಸಿತ್ತು.
ಭಾರತದ ಲಾಂಗ್ಜಂಪರ್ ಎಂ.ಶ್ರೀಶಂಕರ್ 8.27 ಮೀ.ದೂರಕ್ಕೆ ಜಿಗಿದು ಒಲಿಂಪಿಕ್ಸ್ಗೆ ನೇರ ಪ್ರವೇಶ ಪಡೆದಿದ್ದರೂ ಗಾಯದ ಸಮಸ್ಯೆಯ ಕಾರಣಕ್ಕೆ ಗೇಮ್ಸ್ನಿಂದ ಹೊರಗುಳಿದಿದ್ದಾರೆ.
22ರ ಹರೆಯದ ಅಂಕಿತಾ 2023ರ ಏಶ್ಯನ್ ಚಾಂಪಿಯನ್ಶಿಪ್ನಲ್ಲಿ 5,000 ಮೀ.ಓಟದಲ್ಲಿ 15:28.08 ಸೆಕೆಂಡ್ನಲ್ಲಿ ಗುರಿ ತಲುಪಿ ಕಂಚಿನ ಪದಕ ಜಯಿಸಿದ್ದರು. ಈಗಾಗಲೇ 5,000 ಮೀ.ಓಟದಲ್ಲಿ ಅರ್ಹತೆ ಪಡೆದಿರುವ ಪಾರುಲ್ ಚೌಧರಿ ಜೊತೆಗೆ ಅಂಕಿತಾ ಸೇರಲಿದ್ದಾರೆ. ಪ್ಯಾರಿಸ್ನಲ್ಲಿ 5,000 ಮೀ. ಓಟದಲ್ಲಿ ಭಾರತದ ಇಬ್ಬರು ಅತ್ಲೀಟ್ಗಳು ಸ್ಪರ್ಧಿಸಲಿದ್ದಾರೆ.
22ರ ಹರೆಯದ ಅಲ್ಡ್ರಿನ್ ವೈಯಕ್ತಿಕ ಶ್ರೇಷ್ಠ 8.42 ಮೀ.ದೂರಕ್ಕೆ ಜಿಗಿದರೂ ಈ ವರ್ಷ 8 ಮೀ. ತಲುಪಲು ಸಾಧ್ಯವಾಗಿಲ್ಲ, ರಾಷ್ಟ್ರೀಯ ಅಂತರ್-ರಾಜ್ಯ ಚಾಂಪಿಯನ್ಶಿಪ್ನಲ್ಲಿ 7.75 ಮೀ.ದೂರಕ್ಕೆ ಜಿಗಿದು ಬೆಳ್ಳಿ ಪದಕ ಜಯಿಸಿದ್ದರು.
ಜುಲೈ 4ರಂದು ಹಾಲಿ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ನೇತೃತ್ವದ 28 ಸದಸ್ಯರುಗಳನ್ನು ಒಳಗೊಂಡ ಭಾರತದ ಅತ್ಲೆಟಿಕ್ಸ್ ತಂಡವನ್ನು ಪ್ರಕಟಿಸಲಾಗಿತ್ತು.







