ನಾಳೆ ಭಾರತ VS ಆಸ್ಟ್ರೇಲಿಯ | ಕಾಂಗರೂಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯ

ಸಾಂದರ್ಭಿಕ ಚಿತ್ರ | PTI
ಗ್ರಾಸ್ ಐಲೆಟ್ : ಐಸಿಸಿ ಟಿ20 ವಿಶ್ವಕಪ್ನ ತಮ್ಮ ಕೊನೆಯ ಸೂಪರ್ 8 ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯ ತಂಡಗಳು ಸೋಮವಾರ ಮುಖಾಮುಖಿಯಾಗಲಿವೆ. ಆಸ್ಟ್ರೇಲಿಯದ ವಿಶ್ವಕಪ್ ಅಭಿಯಾನವನ್ನು ಸೂಪರ್ 8 ಹಂತದಲ್ಲೇ ಮುಕ್ತಾಯಗೊಳಿಸುವ ಅವಕಾಶವೊಂದು ಭಾರತಕ್ಕೆ ಎದುರಾಗಿದೆ.
ಈ ಪಂದ್ಯವನ್ನು ಭಾರತ ಗೆದ್ದರೆ ಅದು ತನ್ನ ಸೂಪರ್ 8 ಗುಂಪಿನಲ್ಲಿ ಅಗ್ರಸ್ಥಾನಿಯಾಗುತ್ತದೆ ಹಾಗೂ ಆ ಮೂಲಕ ಸರಾಗವಾಗಿ ಸೆಮಿಫೈನಲ್ ತಲುಪುತ್ತದೆ. ಅದೇ ವೇಳೆ, ಸೆಮಿಫೈನಲ್ ತಲುಪುವ ಆಸ್ಟ್ರೇಲಿಯದ ಹಾದಿಗೆ ತಡೆಯನ್ನೂ ಒಡ್ಡುತ್ತದೆ.
ಅಫ್ಘಾನಿಸ್ತಾನದ ವಿರುದ್ಧ ರವಿವಾರ ಆಸ್ಟ್ರೇಲಿಯ ಅನುಭವಿಸಿದ ಅನಿರೀಕ್ಷಿತ ಸೋಲಿನ ಬಳಿಕ ಭಾರತ ವಿರುದ್ಧದ ಪಂದ್ಯವು ಆಸ್ಟ್ರೇಲಿಯಕ್ಕೆ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯವನ್ನು ಆಸ್ಟ್ರೇಲಿಯ ಗೆದ್ದರೂ ತನ್ನ ಹಣೆಬರಹವನ್ನು ತಾನೇ ನಿರ್ಧರಿಸುವ ಸ್ಥಿತಿಯಲ್ಲಿ ಈಗ ಆಸ್ಟ್ರೇಲಿಯ ಇಲ್ಲ. ನಂತರ ನಡೆಯುವ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ಫಲಿತಾಂಶಕ್ಕಾಗಿ ಅದು ಕಾಯಬೇಕಾಗುತ್ತದೆ.
ಭಾರತವು ಉತ್ತಮ ಫಾರ್ಮ್ನಲ್ಲಿದ್ದು, ಆಸ್ಟ್ರೇಲಿಯ ವಿರುದ್ಧದ ಪಂದ್ಯಕ್ಕೆ ಉತ್ತಮ ಸಿದ್ಧತೆಯನ್ನೇ ಮಾಡಿಕೊಂಡಿದೆ. ಅದು ಈಗಾಗಲೇ ಸೂಪರ್ 8 ಹಂತದಲ್ಲಿ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧ ಗೆಲುವು ಸಾಧಿಸಿದೆ.
ಹಾರ್ದಿಕ್ ಪಾಂಡ್ಯ ಆಲ್ರೌಂಡ್ ನಿರ್ವಹಣೆ ನೀಡುತ್ತಿರುವುದು ಭಾರತದ ಪಾಲಿಗೆ ಮಹತ್ವದ ಧನಾತ್ಮಕ ಅಂಶವಾಗಿದೆ. ಅವರು ಬ್ಯಾಟ್ ಮತ್ತು ಚೆಂಡು ಎರಡರಲ್ಲಿಯೂ ಗಣನೀಯ ದೇಣಿಗೆಗಳನ್ನು ನೀಡಿದ್ದಾರೆ. ಸ್ಪಿನ್ನರ್ ಕುಲದೀಪ್ ಯಾದವ್ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಗಳು ಇಲ್ಲಿನ ಡ್ಯಾರನ್ ಸ್ಯಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಹಗಲಿನಲ್ಲಿ ಆಡಲಿವೆ. ಈ ಮೈದಾನದಲ್ಲಿ ಹಗಲು ಹೊತ್ತಿನಲ್ಲಿ ಅಧಿಕ ರನ್ಗಳು ದಾಖಲಾಗಿವೆ ಎಂದು ಐತಿಹಾಸಿಕ ಅಂಕಿಅಂಶಗಳಿಂದ ತಿಳಿಯುತ್ತದೆ.
ಸಂಭಾವ್ಯ ತಂಡಗಳು
ಭಾರತ: ವಿರಾಟ್ ಕೊಹ್ಲಿ, ರೋಹಿತ್ ಶರ್ಮ (ನಾಯಕ), ರಿಶಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಮ್ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್ ಮತ್ತು ಕುಲದೀಪ್ ಯಾದವ್.
ಆಸ್ಟ್ರೇಲಿಯ: ಟ್ರಾವಿಡ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್ (ನಾಯಕ), ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೋಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆ್ಯಡಮ್ ಝಾಂಪ ಮತ್ತು ಜೋಶ್ ಹ್ಯಾಝಲ್ವುಡ್/ಆ್ಯಶ್ಟನ್ ಆ್ಯಗರ್







