ಧರ್ಮಶಾಲಾದಲ್ಲಿ ನಾಳೆಯಿಂದ 5ನೇ ಟೆಸ್ಟ್ : ಭಾರತ-ಇಂಗ್ಲೆಂಡ್ ಸೆಣಸಾಟ
100ನೇ ಪಂದ್ಯ ಆಡಲು ಅಶ್ವಿನ್, ಬೈರ್ಸ್ಟೋವ್ ಸಜ್ಜು

Photo: PTI
ಹೊಸದಿಲ್ಲಿ : ಹಿಮಾಲಯದ ತಪ್ಪಲಲ್ಲಿರುವ ನಗರ ಧರ್ಮಶಾಲಾದಲ್ಲಿ ಗುರುವಾರದಿಂದ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನಾಡಲಿದ್ದು, ಈ ಪಂದ್ಯವು ರವಿಚಂದ್ರನ್ ಅಶ್ವಿನ್ ಹಾಗೂ ಜಾನಿ ಬೈರ್ಸ್ಟೋವ್ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.
ಭಾರತವು ಸರಣಿಯಲ್ಲಿ 3-1 ಮುನ್ನಡೆ ಪಡೆದು ಈಗಾಗಲೇ ಸರಣಿಯನ್ನು ವಶಪಡಿಸಿಕೊಂಡಿದೆ. ಹೀಗಾಗಿ 100ನೇ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಂಡು ಮಹತ್ವದ ಮೈಲಿಗಲ್ಲು ತಲುಪಲಿರುವ ಅಶ್ವಿನ್ ಹಾಗೂ ಬೈರ್ಸ್ಟೋವ್ರತ್ತ ಎಲ್ಲರ ಚಿತ್ತ ಹರಿದಿದೆ.
ಪ್ರಸಕ್ತ ಸರಣಿಯಲ್ಲಿ ಭಾರತ ಪ್ರಚಂಡ ಪ್ರದರ್ಶನ ನೀಡುತ್ತಿದೆ. ರೋಹಿತ್ ಶರ್ಮಾ ಬಳಗವು ಬ್ಯಾಟ್ ಹಾಗೂ ಬಾಲ್ ಎರಡರಲ್ಲೂ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ನಾಲ್ಕನೇ ಟೆಸ್ಟ್ ಪಂದ್ಯವನ್ನು 5 ವಿಕೆಟ್ನಿಂದ ಸುಲಭವಾಗಿ ಗೆದ್ದುಕೊಂಡು ಸರಣಿ ವಶಪಡಿಸಿಕೊಂಡಿರುವ ಭಾರತವು 2012ರಿಂದ ಸ್ವದೇಶದಲ್ಲಿ ಅಜೇಯ ಗೆಲುವಿನ ಓಟ ಕಾಯ್ದುಕೊಂಡಿದೆ. 2012ರಲ್ಲಿ ಅಲಿಸ್ಟೈರ್ ಕುಕ್ ನೇತೃತ್ವದ ಇಂಗ್ಲೆಂಡ್ ವಿರುದ್ಧ ಭಾರತವು 1-2 ಅಂತರದಿಂದ ಸೋತಿತ್ತು. ಆ ನಂತರ ಸೋಲನ್ನೇ ಕಾಣದ ಭಾರತವು ಸತತ 17ನೇ ಟೆಸ್ಟ್ ಸರಣಿಯನ್ನು ಜಯಿಸಿ ತನ್ನ ಗೆಲುವಿನ ಓಟ ಮುಂದುವರಿಸಿದೆ. ಇದೀಗ ಸರಣಿಯನ್ನು 4-1 ಅಂತರದಿಂದ ಗೆಲ್ಲಲು ಬಯಸಿದೆ.
ಭಾರತವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುವತ್ತ ದೃಷ್ಟಿ ಹರಿಸಿದೆ. ಅಶ್ವಿನ್ ರಂತಹ ಅನುಭವಿ ಆಟಗಾರರ ಪಾತ್ರ ಅತ್ಯಂತ ಮುಖ್ಯವಾಗಿದೆ.
ಟೆಸ್ಟ್ ಕ್ರಿಕೆಟ್ ನಲ್ಲಿ 507 ವಿಕೆಟ್ ಗಳನ್ನು ಪಡೆದಿರುವ ಆಫ್ ಸ್ಪಿನ್ನರ್ ಅಶ್ವಿನ್ ಎಲಿಟ್ ಕ್ಲಬ್ ಗೆ ಸೇರ್ಪಡೆಯಾಗಲು ಬಯಸಿದ್ದಾರೆ. ಭಾರತದ ಬೌಲರ್ಗಳ ಪೈಕಿ ಕೇವಲ ಅನಿಲ್ ಕುಂಬ್ಳೆ ಮಾತ್ರ ಅಶ್ವಿನ್ಗಿಂತ ಮುಂದಿದ್ದಾರೆ.
ಮತ್ತೊಂದೆಡೆ ಬೈರ್ಸ್ಟೋವ್ ಅವರು ಇಂಗ್ಲೆಂಡ್ ತಂಡ ಸರಣಿ ಸೋತಿದ್ದರೂ ತನ್ನ 100ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವನ್ನಾಗಿಸುವ ವಿಶ್ವಾಸದಲ್ಲಿದ್ದಾರೆ. ಸಹ ಆಟಗಾರರ ಬೆಂಬಲ ಹಾಗೂ ಇಂಗ್ಲೆಂಡ್ ಅಭಿಮಾನಿಗಳ ಪ್ರೋತ್ಸಾಹದ ನೆರವಿನಿಂದ ಬಲಗೈ ಬ್ಯಾಟರ್ ತನ್ನ ಹಳೆಯ ಫಾರ್ಮ್ಗೆ ಮರಳಿ ಸರಣಿಯ ಕೊನೆಯ ಪಂದ್ಯದಲ್ಲಿ ಮಿಂಚುವ ನಿರೀಕ್ಷೆಯಲ್ಲಿದ್ದಾರೆ.
ತೀವ್ರ ಚಳಿಯ ವಾತಾವರಣದಲ್ಲಿ ಪಿಚ್ ಪರಿಸ್ಥಿತಿ ಹೇಗಿರಬಹುದೆಂಬ ಬಗ್ಗೆ ಚರ್ಚೆ ಜೋರಾಗಿದೆ. ಧರ್ಮಶಾಲಾದಲ್ಲಿ ಗರಿಷ್ಠ 10 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದ್ದು, ಪಿಚ್ ಮೇಲೆ ತೇವಾಂಶ ಇರಲಿದೆ. ದಿನದಾಟದ ಆರಂಭದಲ್ಲಿ ವೇಗದ ಬೌಲರ್ಗಳು ಮೇಲುಗೈ ಸಾಧಿಸಬಹುದು.
ಸಾಂಪ್ರದಾಯಿಕವಾಗಿ ಧರ್ಮಶಾಲಾದ ಪಿಚ್ ವೇಗದ ಬೌಲರ್ಗಳ ಸ್ನೇಹಿಯಾಗಿದೆ. ಈ ಹಿಂದೆ ಸ್ಪಿನ್ನರ್ಗಳು ಕೂಡ ಈ ಪಿಚ್ ನಲ್ಲಿ ಗಮನಾರ್ಹ ಕಾಣಿಕೆ ನೀಡಿದ್ದರು. ಪಿಚ್ ಕುರಿತಾಗಿ ಅಶ್ವಿನ್ ಹಾಗೂ ಬೈರ್ಸ್ಟೋವ್ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೂರು ವಾರಗಳ ಹಿಂದೆ ಈ ಮೈದಾನದಲ್ಲಿ ನಡೆದಿದ್ದ ರಣಜಿ ಪಂದ್ಯದಲ್ಲಿ 36 ವಿಕೆಟ್ ಗಳು ವೇಗಿಗಳ ಪಾಲಾಗಿದ್ದವು. ದಿಲ್ಲಿ ತಂಡವು ಹಿಮಾಚಲ ಪ್ರದೇಶವನ್ನು 76 ರನ್ನಿಂದ ಸೋಲಿಸಿತ್ತು.
ಬೌಲಿಂಗ್ ಸಂಯೋಜನೆಯ ಕುರಿತು ಭಾರತ ಚರ್ಚೆ ನಡೆಸುತ್ತಿದ್ದು, 4ನೇ ಟೆಸ್ಟ್ನಲ್ಲಿ ವಿಶ್ರಾಂತಿ ಪಡೆದಿದ್ದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ವಾಪಸಾಗಲಿದ್ದಾರೆ. ಮುಹಮ್ಮದ್ ಸಿರಾಜ್ರೊಂದಿಗೆ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. ಭಾರತವು ಮೂವರು ವೇಗಿಗಳನ್ನು ಕಣಕ್ಕಿಳಿಸಲಿದೆ ಎಂದು ನಾಯಕ ರೋಹಿತ್ ಸುಳಿವು ನೀಡಿದ್ದಾರೆ. ಆಕಾಶ್ ದೀಪ್ ಹಾಗೂ ಹೆಚ್ಚುವರಿ ಸ್ಪಿನ್ನರ್ ಕುಲದೀಪ್ ಯಾದವ್ ನಡುವೆ ಪೈಪೋಟಿ ಏರ್ಪಟ್ಟಿದೆ. ಆಕಾಶ್ ದೀಪ್ ರಾಂಚಿಯಲ್ಲಿ ಆಡಿರುವ ಪಾದಾರ್ಪಣೆ ಪಂದ್ಯದಲ್ಲಿ ಮೊದಲ ದಿನದಾಟದಲ್ಲಿ 3 ವಿಕೆಟ್ ಗಳನ್ನು ಕಬಳಿಸಿ ಮಿಂಚಿದ್ದರು. ರಜತ್ ಪಾಟಿದಾರ್ ಹಾಗೂ ಸರ್ಫರಾಝ್ ಖಾನ್ರಂತಹ ಯುವ ಆಟಗಾರರು ಸರಣಿಯ ಕೊನೆಯ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನದ ನೀಡುವ ಉತ್ಸಾಹದಲ್ಲಿದ್ದಾರೆ.
ಕರ್ನಾಟಕದ ಬ್ಯಾಟರ್ ದೇವದತ್ತ ಪಡಿಕ್ಕಲ್ ಉಪಸ್ಥಿತಿಯು ಮಧ್ಯಮ ಸರದಿಯಲ್ಲಿ ಹೆಚ್ಚಿನ ಆಯ್ಕೆಯನ್ನು ಸೃಷ್ಟಿಸಿದೆ.
ಇಂಗ್ಲೆಂಡ್ ತಂಡವು ಸರಣಿಯನ್ನು ಸೋತಿದ್ದರೂ ಭಾರತದ ಕ್ರಿಕೆಟ್ ಪ್ರವಾಸವನ್ನು ಗೆಲುವಿನೊಂದಿಗೆ ಅಂತ್ಯಗೊಳಿಸುವ ಗುರಿ ಇಟ್ಟುಕೊಂಡಿದೆ.
ತಮ್ಮ ದೇಶವನ್ನು ಪ್ರತಿನಿಧಿಸುವ ಪ್ರತಿಯೊಂದು ಅವಕಾಶಕ್ಕೂ ತಂಡ ಅಚಲ ಬದ್ಧತೆ ಹೊಂದಿದೆ ಎಂದು ನಾಯಕ ಬೆನ್ ಸ್ಟೋಕ್ಸ್ ಒತ್ತಿ ಹೇಳಿದರು.
ಇಂಗ್ಲೆಂಡ್ ಸರಣಿಯ ಆರಂಭದಲ್ಲಿ ಏಕೈಕ ಸ್ಪೆಷಲಿಸ್ಟ್ ವೇಗಿಯೊಂದಿಗೆ ಆಡಿತ್ತು. ಹಿಂದಿನ ಪಂದ್ಯದಲ್ಲಿ ಇಬ್ಬರು ವೇಗಿಗಳನ್ನು ಆಡಿಸಲಾಗಿತ್ತು. ಈ ಪಂದ್ಯದಲ್ಲೂ ಇದೇ ಸೂತ್ರವನ್ನು ಮುಂದುವರಿಸುತ್ತಿರುವ ಕಾರಣ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್ ಹಾಗೂ ಮಾರ್ಕ್ ವುಡ್ ಆಡಲಿದ್ದಾರೆ.
ಪಂದ್ಯ ಆರಂಭದ ಸಮಯ: ಬೆಳಗ್ಗೆ 9:30
ತಂಡಗಳು
ಭಾರತ: ರೋಹಿತ್ ಶರ್ಮಾ(ನಾಯಕ), ಜಸ್ಪ್ರೀತ್ ಬುಮ್ರಾ(ಉಪ ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಝ್ ಖಾನ್, ಧ್ರುವ್ ಜುರೆಲ್(ವಿಕೆಟ್ ಕೀಪರ್), ಕೆ.ಎಸ್. ಭರತ್(ವಿಕೆಟ್ ಕೀಪರ್), ದೇವದತ್ತ ಪಡಿಕ್ಕಲ್, ಆರ್.ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮುಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಆಕಾಶ್ ದೀಪ್.
ಇಂಗ್ಲೆಂಡ್ 11ರ ಬಳಗ: ಬೆನ್ ಸ್ಟೋಕ್ಸ್(ನಾಯಕ), ಝಾಕ್ ಕ್ರಾವ್ಲೆ, ಬೆನ್ ಡಕೆಟ್, ಒಲಿ ಪೋಪ್, ಜೋ ರೂಟ್, ಜಾನಿ ಬೈರ್ಸ್ಟೋವ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್, ಶುಐಬ್ ಬಶೀರ್.







