ಮತ್ತೊಮ್ಮೆ ಕೆಕೆಆರ್ ತಂಡ ಸೇರಿದ ಅಭಿಷೇಕ್ ನಾಯರ್

ಅಭಿಷೇಕ್ ನಾಯರ್ | PC : X
ಹೊಸದಿಲ್ಲಿ: ಭಾರತದ ಪುರುಷರ ಕ್ರಿಕೆಟ್ ತಂಡದಿಂದ ನಿರ್ಗಮಿಸಿರುವ ಸುದ್ದಿ ಹೊರ ಬಿದ್ದ ಕೆಲವೇ ದಿನಗಳ ನಂತರ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರು ಪ್ರಸಕ್ತ ಐಪಿಎಲ್ ಟೂರ್ನಿಯ ಮಧ್ಯದಲ್ಲಿ ಕೋಲ್ಕತಾ ನೈಟ್ ರೈಡಸ್ರ್ ತಂಡವನ್ನು ಮತ್ತೆ ಸೇರಿಕೊಂಡಿದ್ದಾರೆ.
ನಾಯರ್ ಅವರು ಮತ್ತೊಮ್ಮೆ ಐಪಿಎಲ್ ಫ್ರಾಂಚೈಸಿ ಸೇರಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಈ ಬೆಳವಣಿಗೆಯ ಬಗ್ಗೆ ಬಿಸಿಸಿಐ ಅಧಿಕೃತ ಘೋಷಣೆ ಮಾಡುವ ಮೊದಲೇ ನಾಯರ್ ಈ ಹೆಜ್ಜೆ ಇಟ್ಟಿದ್ದಾರೆ.
ಒಂದೆರಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿಕೆ ನೀಡಿದ್ದರು. ಆದರೆ ಅಭೂತಪೂರ್ವ ಹೆಜ್ಜೆಯೊಂದರಲ್ಲಿ ಶಾರುಕ್ ಖಾನ್ ಮಾಲಿಕತ್ವದ ಐಪಿಎಲ್ ಫ್ರಾಂಚೈಸಿ, ಶನಿವಾರ ತನ್ನ ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ನಾಯರ್ ಆಗಮನವನ್ನು ಖಚಿತಪಡಿಸಿದೆ.
ಭಾರತದ ಮಾಜಿ ಆಲ್ ರೌಂಡರ್ ನಾಯರ್ ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ತಂಡದ ತರಬೇತಿಯ ಭಾಗವಾಗುವ ನಿರೀಕ್ಷೆಯಿದ್ದು, ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ರೊಂದಿಗೆ ಕಾಣಿಸಿಕೊಂಡಿದ್ದಾರೆ.
ಕೆಕೆಆರ್ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಸುಳಿವು ನೀಡಿದ ನಂತರ ಈ ಬೆಳವಣಿಗೆ ನಡೆದಿದೆ. ನಾಯರ್ ಜೊತೆ ಕೆಕೆಆರ್ ಜರ್ಸಿ ಧರಿಸಿರುವ ಫೋಟೊವನ್ನು ಸ್ಪಿನ್ನರ್ ಚಕ್ರವರ್ತಿ ಪೋಸ್ಟ್ ಮಾಡಿದ್ದರು.





