ಭಾರತವನ್ನು 2-1 ಗೋಲುಗಳಿಂದ ಸೋಲಿಸಿದ ಅಫ್ಘಾನಿಸ್ತಾನ
2026ರ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯ

Photo: PTI
ಗುವಾಹಟಿ: 2026ರ ಫಿಫಾ ವಿಶ್ವಕಪ್ಗಾಗಿ ಮಂಗಳವಾರ ನಡೆದ ಅರ್ಹತಾ ಪಂದ್ಯದಲ್ಲಿ ಅಫ್ಘಾನಿಸ್ತಾನವು ಭಾರತವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿದೆ.
ಗುವಾಹಟಿಯಲ್ಲಿ ನಡೆದ ಪಂದ್ಯದ ಮೊದಲಾರ್ಧದಲ್ಲಿ ನಾಯಕ ಸುನೀಲ್ ಛೇತ್ರಿಯ ಗೋಲಿನ ನೆರವಿನಿಂದ ಭಾರತ ಮುನ್ನಡೆಯಲ್ಲಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಅಫ್ಘಾನಿಸ್ತಾನ ಆಟಗಾರರು ಮೈದಾನದಲ್ಲಿ ತಮ್ಮ ಪ್ರಾಬಲ್ಯವನ್ನು ಸಾಧಿಸಿ ಎರಡು ಗೋಲುಗಳನ್ನು ದಾಖಲಿಸಿದರು.
ಇದು ಭಾರತ ತಂಡದ ನಾಯಕ ಛೇತ್ರಿಯ 150ನೇ ಅಂತರ್ರಾಷ್ಟ್ರೀಯ ಪಂದ್ಯವಾಗಿತ್ತು. ಆದರೆ, ದುರದೃಷ್ಟವಶಾತ್ ಈ ಮೈಲಿಗಲ್ಲು ಪಂದ್ಯವನ್ನು ವಿಜಯದ ಮೂಲಕ ಸ್ಮರಣೀಯಗೊಳಿಸುವ ಅವರ ಆಶೆ ಕೈಗೂಡಲಿಲ್ಲ.
ಪಂದ್ಯದ ಮೊದಲ ಗೋಲನ್ನು ಸುನೀಲ್ ಛೇತ್ರಿ 37ನೆ ನಿಮಿಷದಲ್ಲಿ ಬಾರಿಸಿದರು. ಅವರು ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿದರು. ಆ ಮೂಲಕ ಭಾರತಕ್ಕೆ 1-0 ಅಂತರದ ಮುನ್ನಡೆ ಒದಗಿಸಿದರು.
ಬಳಿಕ ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ.
ಆದರೆ, ದ್ವಿತೀಯಾರ್ಧವು ಅಫ್ಘಾನಿಸ್ತಾನಕ್ಕೆ ಸೇರಿತು. 70ನೇ ನಿಮಿಷದಲ್ಲಿ ಅಫ್ಘಾನಿಸ್ತಾನದ ರಹ್ಮತ್ ಅಕ್ಬರಿ ಗೋಲು ಬಾರಿಸಿ ಅಂಕಪಟ್ಟಿಯನ್ನು ಸಮಗೊಳಿಸಿದರು. ಆಗ ಪಂದ್ಯವು 1-1ರ ಸಮಬಲದಲ್ಲಿತ್ತು.
ಬಳಿಕ 88ನೇ ನಿಮಿಷದಲ್ಲಿ ಶರೀಫ್ ಮುಖಮ್ಮದ್ ಗೋಲು ಬಾರಿಸಿ ತಂಡಕ್ಕೆ 2-1ರ ಮುನ್ನಡೆಯೊದಗಿಸಿದರು.
ಬಳಿಕ ಭಾರತೀಯ ಆಟಗಾರರಿಗೆ ಅಂಕಪಟ್ಟಿಯನ್ನು ಸಮಬಲಗೊಳಿಸಲು ಸಾಧ್ಯವಾಗಲಿಲ್ಲ.
ಉಭಯ ತಂಡಗಳ ನಡುವೆ ಈ ಹಿಂದೆ ಸೌದಿ ಅರೇಬಿಯದಲ್ಲಿ ನಡೆದಿರುವ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯವು ಗೋಲುರಹಿತ ಡ್ರಾ ಆಗಿತ್ತು.
ಪಾಕಿಸ್ತಾನದ ವಿರುದ್ಧ ತನ್ನ ಚೊಚ್ಚಲ ಪಂದ್ಯ ಆಡಿರುವ ಛೇತ್ರಿ, 150 ಅಥವಾ ಅದಕ್ಕಿಂತಲೂ ಹೆಚ್ಚಿನ ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಆಡಿರುವ 40ನೇ ಫುಟ್ಬಾಲ್ ಆಟಗಾರನಾಗಿದ್ದಾರೆ.







