ಅಖಿಲ ಭಾರತ ಅಂತರ ವಿವಿ ಮಹಿಳಾ ಕ್ರಿಕೆಟ್ | ಪೂರ್ವಾಂಚಲ ವಿವಿಗೆ ಚಾಂಪಿಯನ್ ಕಿರೀಟ
ಮಣಿಪಾಲ : ಉತ್ತರ ಪ್ರದೇಶ ಜೌನಪುರದ ವೀರಬಹಾದೂರ್ ಸಿಂಗ್ ಪೂರ್ವಾಂಚಲ ವಿವಿ ಮಹಿಳಾ ತಂಡ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಭಾರತೀಯ ವಿವಿ ಸಂಘದ ಸಹಯೋಗದೊಂದಿಗೆ ಇಲ್ಲಿನ ಎಂಡ್ ಪಾಯಿಂಟ್ ಮೈದಾನದಲ್ಲಿ ಆಯೋಜಿಸಿದ 2023-24ನೇ ಸಾಲಿನ ಅಖಿಲ ಭಾರತ ಅಂತರ ವಲಯ ಅಂತರ ವಿವಿ ಮಹಿಳಾ ಕ್ರಿಕೆಟ್ ಟೂರ್ನಿಯನ್ನು ಗೆದ್ದುಕೊಳ್ಳುವ ಮೂಲಕ ರಾಷ್ಟ್ರೀಯ ವಿವಿ ಮಹಿಳಾ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಸೋಮವಾರ ನಡೆದ ಜಿದ್ದಾಜಿದ್ದಿನ ಫೈನಲ್‌ನಲ್ಲಿ ಪೂರ್ವಾಂಚಲ ವಿವಿ ತಂಡ, ಪಂಜಾಬ್ ಅಮೃತಸರದ ಗುರುನಾನಕ್ ದೇವ್ ವಿವಿ ತಂಡವನ್ನು 3 ವಿಕೆಟ್‌ಗಳ ಅಂತರದಿಂದ ಪರಾಭವಗೊಳಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಗುರುನಾನಕ್ ದೇವ್ ವಿವಿ (ಜಿಎನ್‌ಡಿಯು) ತಂಡ ನಿಗದಿತ ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿದರೆ, ಉತ್ತರವಾಗಿ ಪೂರ್ವಾಂಚಲ ವಿವಿಯ ಮಹಿಳೆಯರು ಕೆಲವು ಆತಂಕದ ಕ್ಷಣಗಳನ್ನು ಎದುರಿಸಿ ಅಂತಿಮವಾಗಿ 7 ವಿಕೆಟ್‌ಗಳ ನಷ್ಟಕ್ಕೆ 127 ರನ್ ಗಳಿಸಿ ಜಯಭೇರಿ ಬಾರಿಸಿದರು. ತನ್ನ ಅತ್ಯುತ್ತಮ ಆಲ್‌ರೌಂಡ್ ಆಟಕ್ಕಾಗಿ ಪೂರ್ವಾಂಚಲ ತಂಡದ ಸಂಪದ್ ದೀಕ್ಷಿತ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ನಿನ್ನೆ ಸೆಮಿಫೈನಲ್‌ನಲ್ಲಿ ಸೋತ ಬಿಹಾರ ದರ್ಬಾಂಗದ ಲಲಿತ್ ನಾರಾಯಣ್ ಮಿಥಿಲಾ ವಿವಿ ಮೂರನೇ ಸ್ಥಾನ ಪಡೆದರೆ, ಹರ್ಯಾಣ ರೋಹ್ಟಕ್‌ನ ಮಹರ್ಷಿ ದಯಾನಂದ ವಿವಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಗುರುನಾನಕ್ ದೇವ್ ವಿವಿಯ ಮೇಘಾ ಅವರು ಅತ್ಯುತ್ತಮ ಬ್ಯಾಟಿಂಗ್‌ಗೆ ಹಾಗೂ ಅದೇ ವಿವಿಯ ಪ್ರಿಯಾಂಕಾ ಎಂ. ಅತ್ಯುತ್ತಮ ಬೌಲಿಂಗ್‌ಗೆ ಹಾಗೂ ಟೂರ್ನಿ ಶ್ರೇಷ್ಠ ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದುಕೊಂಡರು.
ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾಹೆಯ ಕುಲಪತಿ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್, ಪ್ರೊ ವೈಸ್ ಚಾನ್ಸಲರ್ ಡಾ.ಶರತ್ ರಾವ್ ಅವರು ಭಾಗವಹಿಸಿ ಪ್ರಶಸ್ತಿ ಹಾಗೂ ಬಹುಮಾನಗಳನ್ನು ವಿತರಿಸಿದರು.







