ಒಲಿಂಪಿಕ್ ಗ್ರಾಮ ಪ್ರವೇಶಿಸಲು ಯತ್ನ ಆರೋಪ; ಅಂತಿಮ್ ಪಾಂಘಲ್ ಪರಿವಾರ ಗಡೀಪಾರು

ಅಂತಿಮ್ ಪಾಂಘಲ್ PC:x.com/snehamordani
ಪ್ಯಾರಿಸ್: ಒಲಿಂಪಿಕ್ಸ್ ಕ್ರೀಡಾಕೂಟದ 53 ಕೆ.ಜಿ. ಮಹಿಳೆಯರ ವರ್ಗದ ಕುಸ್ತಿಯಲ್ಲಿ ಟರ್ಕಿಯ ಯೆತ್ಗಿಲ್ ಝೆನೆಪ್ ವಿರುದ್ಧ 0-10 ಅಂಕಗಳ ಹೀನಾಯ ಸೋಲು ಅನುಭವಿಸಿರುವ ಭಾರತದ ಅಂತಿಮ್ ಪಾಂಘಲ್ ಅವರ ಸಹೋದರಿ ನಿಶಾ, ಭಾರತೀಯ ಕುಸ್ತಿಪಟುಗಳ ಮಾನ್ಯತೆಯನ್ನು ಬಳಸಿಕೊಂಡು ಒಲಿಂಪಿಕ್ ಗ್ರಾಮ ಪ್ರವೇಶಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಪಾಂಘಲ್ ಅವರ ಪರಿವಾರವನ್ನು ಗಡೀಪಾರು ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಪೊಲೀಸರು ಈಕೆಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ ಬಳಿಕ ಬಿಡುಗಡೆ ಮಾಡಿದ್ದರು.
ಈ ಘಟನೆಯ ಹಿನ್ನೆಲೆಯಲ್ಲಿ ಅಂತಿಮ್ ಅವರ ಇಡೀ ಪರಿವಾರವನ್ನು ಗಡೀಪಾರು ಮಾಡಲು ನಿರ್ಧರಿಸಲಾಗಿದ್ದು, ಅವರ ಮಾನ್ಯತಾ ಪತ್ರ ಕೂಡಾ ರದ್ದಾಗಲಿದೆ.
ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಗೆ ಶಿಸ್ತು ಉಲ್ಲಂಘನೆ ಪ್ರಕರಣವನ್ನು ಫ್ರಾನ್ಸ್ ಅಧಿಕಾರಿಗಳು ಗಮನಕ್ಕೆ ತಂದ ಬೆನ್ನಲ್ಲೇ ಅಂತಿಮ್ ಹಾಗೂ ಅವರ ಬೆಂಬಲ ಸಿಬ್ಬಂದಿಯನ್ನು ವಾಪಾಸು ಕರೆಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಐಓಎ ಪ್ರಕಟಣೆ ಹೇಳಿದೆ.
ಬೌಟ್ ನಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ನಿಯೋಜಿತ ಕೋಚ್ ಭಗತ್ ಸಿಂಗ್ ಮತ್ತು ಕೋಚ್ ವಿಕಾಸ್ ಇದ್ದ ಹೋಟೆಲ್ ಗೆ ತೆರಳಿದರು. ಒಲಿಂಪಿಕ್ ಗ್ರಾಮಕ್ಕೆ ತೆರಳಿ ಎಲ್ಲ ಸಾಮಾನು ಸರಂಜಾಮುಗಳೊಂದಿಗೆ ಮರಳುವಂತೆ ಅಂತಿಮ್ ತಮ್ಮ ಸಹೋದರಿಗೆ ಸೂಚಿಸಿದ್ದಾರೆ. ಒಲಿಂಪಿಕ್ ಗ್ರಾಮ ಪ್ರವೇಶಿಸುವ ಪ್ರಯತ್ನ ದ ವೇಳೆ ಭದ್ರತಾ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದಿದ್ದರು.







