ಅಮೆರಿಕದ ಫುಟ್ಬಾಲ್ ಆಟಗಾರ್ತಿ ಅಲೆಕ್ಸ್ ಮೊರ್ಗನ್ ನಿವೃತ್ತಿ

ಅಲೆಕ್ಸ್ ಮೊರ್ಗನ್ | PC : X/@alexmorgan13
ನ್ಯೂಯಾಕ್ : ಅಮೆರಿಕದ ಹಿರಿಯ ಆಟಗಾರ್ತಿ ಅಲೆಕ್ಸ್ ಮೊರ್ಗನ್ ರವಿವಾರ ಫುಟ್ಬಾಲ್ ಪಂದ್ಯಕ್ಕೆ ವಿದಾಯ ಹೇಳಿದರು.
ತನ್ನ ಯಶಸ್ವಿ ವೃತ್ತಿಜೀವನದ ಕೊನೆಯ ಪಂದ್ಯವನ್ನು ಆಡುವಾಗ ಮೊರ್ಗನ್ ಭಾವುಕರಾದರು. 35ರ ಹರೆಯದ ಸ್ಟ್ರೈಕರ್ ಮೊರ್ಗನ್ ಅವರು ಗುರುವಾರ ತನ್ನ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದ್ದರು. ತಾನು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದೇನೆ ಎಂದು ಬಹಿರಂಗಪಡಿಸಿದ್ದರು.
ಮೊರ್ಗನ್ ಕ್ಯಾಲಿಫೋರ್ನಿಯಾದಲ್ಲಿ ನಡೆದ ನಾರ್ತ್ ಕೆರೊಲಿನಾ ಕರೇಜ್ ವಿರುದ್ಧ ನಡೆದ ನ್ಯಾಶನಲ್ ವುಮೆನ್ಸ್ ಸಾಕರ್ ಲೀಗ್ ಪಂದ್ಯದಲ್ಲಿ ಸ್ಯಾನ್ ಡಿಯಾಗೊ ವೇವ್ಸ್ ಪರ ಮೊದಲ 13 ನಿಮಿಷ ಆಡಿದರು.
14 ವರ್ಷಗಳ ಅಂತರ್ರಾಷ್ಟ್ರೀಯ ವೃತ್ತಿಜೀವನದಲ್ಲಿ ಅಲೆಕ್ಸ್ ಮೊರ್ಗನ್ ಅವರು ಒಟ್ಟು 123 ಗೋಲುಗಳನ್ನು ಗಳಿಸಿದ್ದರು. 53 ಅಸಿಸ್ಟ್ ಮಾಡಿದ್ದರು. ಅಮೆರಿಕ ಮಹಿಳೆಯರ ಸಾರ್ವಕಾಲಿಕ ಶ್ರೇಷ್ಠ ಗೋಲ್ ಸ್ಕೋರರ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.
2010ರಲ್ಲಿ ಚೀನಾ ವಿರುದ್ಧ ಮೊದಲ ಅಂತರ್ರಾಷ್ಟ್ರೀಯ ಗೋಲು ಗಳಿಸಿದ್ದ ಮೊರ್ಗನ್ ಅವರು 32 ದೇಶಗಳ ವಿರುದ್ಧ ಗೋಲು ಗಳಿಸಿದ್ದರು. ಜಪಾನ್ ವಿರುದ್ಧ ಅತಿ ಹೆಚ್ಚು 12 ಗೋಲು ಗಳಿಸಿದ್ದರು. ಜೂನ್ 4ರಂದು ದಕ್ಷಿಣ ಕೊರಿಯ ವಿರುದ್ಧ ಅಮೆರಿಕದ ಜರ್ಸಿ ಧರಿಸಿ ಕೊನೆಯ ಬಾರಿ ಆಡಿದ್ದರು. ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ಮಹಿಳೆಯರ ಗೋಲ್ಡ್ ಕಪ್ನಲ್ಲಿ ಅರ್ಜೆಂಟೀನದ ವಿರುದ್ಧ ತನ್ನ ಕೊನೆಯ ಗೋಲು ಗಳಿಸಿದ್ದರು.
ಎರಡು ಬಾರಿ ಮಹಿಳೆಯರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಮೊರ್ಗನ್ 22 ವಿಶ್ವಕಪ್ ಪಂದ್ಯಗಳನ್ನು ಆಡಿದ್ದರು. 9 ಗೋಲುಗಳನ್ನು ಗಳಿಸಿದ್ದರು. 16 ಒಲಿಂಪಿಕ್ಸ್ ಪಂದ್ಯಗಳಲ್ಲಿ ಆರು ಗೋಲು ದಾಖಲಿಸಿದ್ದರು.







