ಕೋಚ್ ಗೌತಮ್ ಗಂಭೀರ್ ಗೆ ಸ್ಪಷ್ಟ ಸಂದೇಶ ನೀಡಿದ ಅರ್ಷದೀಪ್ ಸಿಂಗ್!

ಗೌತಮ್ ಗಂಭೀರ್ | Photo Credit : PTI
ಹೊಬರ್ಟ್, ನ.2: ಭಾರತ ತಂಡದ ಆಡುವ 11ರ ಬಳಗಕ್ಕೆ ಯಶಸ್ವಿ ಪುನರಾಗಮನಗೈದಿರುವ ಅರ್ಷದೀಪ್ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದು, ತಾನೋರ್ವ ಟಿ-20 ಕ್ರಿಕೆಟ್ ನ ಮ್ಯಾಚ್ ವಿನ್ನರ್ ಎಂಬ ಹಿರಿಮೆಯನ್ನು ಕಾಯ್ದುಕೊಂಡಿದ್ದಾರೆ.
ಆಸ್ಟ್ರೇಲಿಯ ವಿರುದ್ಧ ಟಿ-20 ಸರಣಿಯ ಮೊದಲೆರಡು ಪಂದ್ಯಗಳಿಂದ ವಂಚಿತರಾಗಿದ್ದ ಅರ್ಷದೀಪ್ ರವಿವಾರ ಮೊದಲ 2 ಓವರ್ ಗಳಲ್ಲಿ ಪ್ರಮುಖ ಎರಡು ವಿಕೆಟ್ ಗಳನ್ನು ಉರುಳಿಸಿದರು. ಟ್ರಾವಿಸ್ ಹೆಡ್ ಕೇವಲ 6 ರನ್ ಹಾಗೂ ಇಂಗ್ಲಿಸ್ 1 ರನ್ ಗಳಿಸಿ ಅರ್ಷದೀಪ್ ಸ್ವಿಂಗ್ ಬೌಲಿಂಗ್ ಗೆ ವಿಕೆಟ್ ಒಪ್ಪಿಸಿದರು.
ಹರ್ಷಿತ್ ರಾಣಾಗೋಸ್ಕರ ಅರ್ಷದೀಪ್ ರನ್ನು ಮೊದಲೆರಡು ಪಂದ್ಯಗಳಿಂದ ಆಡುವ ಬಳಗದಿಂದ ಹೊರಗಿಡಲಾಗಿತ್ತು. ಆದರೆ ರಾಣಾ ಸೇರ್ಪಡೆಯಿಂದ ಯಾವುದೇ ಉಪಯೋಗವಾಗಿಲ್ಲ. ಕೋಚ್ ಗೌತಮ್ ಗಂಭೀರ್ ಅವರು ರಾಣಾಗೆ ಹೆಚ್ಚು ಮಣೆ ಹಾಕುತ್ತಿರುವುದನ್ನು ಅಭಿಮಾನಿಗಳು ಹಾಗೂ ಮಾಜಿ ಆಟಗಾರರು ಪ್ರಶ್ನಿಸಿದ್ದರು. ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಗಳನ್ನು ಪಡೆದಿರುವ ಅರ್ಷದೀಪ್ ರನ್ನು ಕಡೆಗಣಿಸಿದ್ದನ್ನು ಎಲ್ಲರೂ ಪ್ರಶ್ನಿಸಿದ್ದರು.





