ಏಷ್ಯಾಕಪ್ ಫೈನಲ್: ಭಾರತಕ್ಕೆ ಗಾಯದ ಭೀತಿ; ಬೌಲಿಂಗ್ ಕೋಚ್ ಮೋರ್ನೆ ಮೊರ್ಕೆಲ್ ಹೇಳಿದ್ದೇನು?

PC: x.com/CatchOfThe40986
ದುಬೈ: ಏಷ್ಯಾದ ಬದ್ಧ ಪ್ರತಿಸ್ಪರ್ಧಿಗಳ ನಡುವಿನ ಕದನಕ್ಕೆ ಏಷ್ಯಾ ಕಪ್ ಫೈನಲ್ ವೇದಿಕೆ ಸಜ್ಜಾಗಿದ್ದು, ರವಿವಾರದ ಹೋರಾಟಕ್ಕೆ ಒಂದು ದಿನ ಮೊದಲು ಭಾರತದ ಇಬ್ಬರು ಪ್ರಮುಖ ಆಟಗಾರರು ಗಾಯಗೊಂಡಿರುವುದನ್ನು ಭಾರತ ತಂಡದ ಬೌಲಿಂಗ್ ಕೋಚ್ ಮೋರ್ನ್ ಮೊರ್ಕೆಲ್ ಪ್ರಕಟಿಸಿದ್ದಾರೆ.
ಶ್ರೀಲಂಕಾ ವಿರುದ್ಧ ಮೊದಲ ಓವರ್ ಬೌಲಿಂಗ್ ಮಾಡಿ ವಿಕೆಟ್ ಪಡೆದಿದ್ದ ಹಾರ್ದಿಕ್ ಪಾಂಡ್ಯ ಒಂದನೇ ಓವರ್ ಬಳಿಕ ಮೈದಾನದಿಂದ ಹೊರ ನಡೆದಿದ್ದರು. ಅಂತೆಯೇ ಅತ್ಯುತ್ತಮ ಫಾರ್ಮ್ ನಲ್ಲಿರುವ ಅಭಿಷೇಕ್ ಶರ್ಮಾ 9.2 ಓವರ್ ಗಳಾದ ಬಳಿಕ ಪೆವಿಲಿಯನ್ ಗೆ ತೆರಳಿದ್ದರು.
ಇಬ್ಬರೂ ಸ್ನಾಯು ಸೆಳೆತ ಸಮಸ್ಯೆಯಿಂದ ಮೈದಾನದಿಂದ ಹೊರ ನಡೆದದ್ದಾಗಿ ಮೊರ್ಕೆಲ್ ಸ್ಪಷ್ಟಪಡಿಸಿದ್ದಾರೆ. "ಹಾರ್ದಿಕ್ ಪಾಂಡ್ಯ ಅವರನ್ನು ರಾತ್ರಿ ಮತ್ತು ನಾಳೆ ಬೆಳಿಗ್ಗೆ ಪರೀಕ್ಷಿಸಲಾಗುತ್ತದೆ. ಆ ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ. ಪಂದ್ಯದ ವೇಳೆ ಇಬ್ಬರೂ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಅಭಿಷೇಕ್ ಚೆನ್ನಾಗಿದ್ದಾರೆ" ಎಂದು ವಿವರ ನೀಡಿದರು.
ತೂಗುಯ್ಯಾಲೆಯಾಗಿದ್ದ ಪಂದ್ಯವನ್ನು ಭಾರತ ಗೆದ್ದ ಬಳಿಕ ಪ್ರತಿಕ್ರಿಯಿಸಿದ ಅವರು, "ನಮ್ಮ ಸಂಪೂರ್ಣ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನಮ್ಮಿಂದ ಬಂದಿಲ್ಲ" ಎಂದು ಒಪ್ಪಿಕೊಂಡರು. ಪ್ರತಿ ಪಂದ್ಯದ ಬಳಿಕವೂ ನಾವು ಸುಧಾರಿಸಬೇಕಾದ ಅಂಶಗಳ ಬಗ್ಗೆ ಚರ್ಚೆ ನಡೆಯುತ್ತದೆ. ಬ್ಯಾಟಿಂಗ್ ವಿಷಯಕ್ಕೆ ಬಂದರೆ ಕಠಿಣ ಪರಿಸ್ಥಿತಿಯಲ್ಲಿ ಸ್ಟ್ರೈಕ್ ರೊಟೇಟ್ ಮಾಡುವುದು ಸುಧಾರಿಸಬೇಕು. ಬೌಲಿಂಗ್ ನಲ್ಲಿ ಮೊದಲ 10 ಓವರ್ ನಲ್ಲಿ ನಮ್ಮ ಲೆಂಗ್ತ್ ಇನ್ನಷ್ಟು ಮೊನಚಾಗಬೇಕು, ನಿಖರ ಹಾಗೂ ನಿರ್ಧಾರ ಕೈಗೊಳ್ಳುವಲ್ಲಿ ಸುಧಾರಿಸಬೇಕಿದೆ ಎಂದರು.







