ಏಷ್ಯಾಕಪ್: ಕಳಪೆ ಫೀಲ್ಡಿಂಗ್ ಒಪ್ಪಿಕೊಂಡ ಭಾರತೀಯ ಆಟಗಾರ

PC: x.com/ImTanujSingh
ಹೊಸದಿಲ್ಲಿ: ಏಷ್ಯಾ ಕಪ್ ಟಿ20 ಟೂರ್ನಿಯ ಬುಧವಾರದ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು 41 ರನ್ ಗಳ ಅಂತರದಿಂದ ಸುಲಭವಾಗಿ ಸೋಲಿಸಿದೆ. ಆದರೆ ಟೂರ್ನಿಯುದ್ದಕ್ಕೂ ಭಾರತದ ಕಳಪೆ ಫೀಲ್ಡಿಂಗ್ ತೀವ್ರ ಟೀಕೆಗೆ ಗುರಿಯಾಗಿದೆ. ಇಡೀ ಟೂರ್ನಿಯಲ್ಲಿ ಭಾರತೀಯ ಆಟಗಾರರು 12 ಕ್ಯಾಚ್ ಗಳನ್ನು ಕೈಚೆಲ್ಲಿದ್ದು, ಈ ಪೈಕಿ ಎರಡು ಪಂದ್ಯಗಳಲ್ಲೇ ಒಂಬತ್ತು ಕ್ಯಾಚ್ ಗಳನ್ನು ಕೈಚೆಲ್ಲಿರುವುದು ಭಾರತ ತಂಡದ ಫೀಲ್ಡಿಂಗ್ ಗುಣಮಟ್ಟಕ್ಕೆ ಕನ್ನಡಿ ಹಿಡಿದಿದೆ.
ಭಾರತ ತಂಡದ ಭಾಗವಾಗಿರುವ ವರುಣ್ ಚಕ್ರವರ್ತಿ ಸ್ವತಃ ಲೋಪಗಳನ್ನು ಒಪ್ಪಿಕೊಂಡಿದ್ದಾರೆ. "ಅವರು ಹೇಳುವಂತೆ ಈ ಹಂತದಲ್ಲಿ ಯಾರೂ ಕಾರಣಗಳನ್ನು ಹೇಳಲಾಗದು. ನಾವು ಫೈನಲ್ ಗೆ ಅರ್ಹತೆ ಪಡೆಯುವುದರಿಂದ ತಂಡವಾಗಿ ನಾವು ಖಂಡಿತವಾಗಿಯೂ ಎಲ್ಲ ಕ್ಯಾಚಿಂಗ್ ಅವಕಾಶಗಳನ್ನು ಬಳಸಿಕೊಳ್ಳಬೇಕು" ಎಂದು ಬಾಂಗ್ಲಾ ಪಂದ್ಯದ ಬಳಿಕ ಚಕ್ರವರ್ತಿ ನುಡಿದರು.
ಮೈದಾನದಲ್ಲಿ ಫೀಲ್ಡರ್ಗಳ ಏಕಾಗ್ರತೆಗೆ ಭಂಗ ತರುವ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದ "ರಿಂಗ್ ಆಫ್ ಫೈರ್" ಬಗ್ಗೆ ಭಾರತೀಯ ಸ್ಪಿನ್ನರ್ ಉಲ್ಲೇಖಿಸಿದರು. ಅದು ಕೆಲವೊಮ್ಮೆ ಗೋಚರಿಸುತ್ತದೆ ಹಾಗೂ ಒಂದಷ್ಟು ತೊಂದರೆ ಕೊಡುತ್ತದೆ. ಅದನ್ನು ನಾವು ರೂಢಿ ಮಾಡಿಕೊಳ್ಳಬೇಕು ಎಂದು ಹೇಳಿದರು. ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಇನ್ನಷ್ಟು ನಿಷ್ಠುರರಾಗಬೇಕು ಎಂದು ಅಭಿಪ್ರಾಯಪಟ್ಟರು.
"ಮುಂದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಲಾಗಿದೆ. ನಮ್ಮ ಫೀಲ್ಡಿಂಗ್ ನಾವು ಸುಧಾರಿಸಿಕೊಳ್ಳಬೇಕು. ಸಹಜವಾಗಿಯೇ ಇದರಲ್ಲಿ ಫೀಲ್ಡಿಂಗ್ ಕೋಚ್ ಹೇಳುವಂಥದ್ದು ಬಹಳಷ್ಟು ಇದೆ. ಕಳೆದ ಪಂದ್ಯದಲ್ಲಿ ಅವರು ಹೆಚ್ಚು ಹೇಳಿಲ್ಲ; ಆದರೆ ಈ ಪಂದ್ಯದಲ್ಲಿ ನನಗೆ ಅನಿಸಿದಂತೆ ಹೇಳುವುದು ಸಾಕಷ್ಟಿದೆ" ಎಂದು ವಿಶ್ಲೇಷಿಸಿದರು.







