ಏಷ್ಯಾಕಪ್ ಟಿ20 ಟೂರ್ನಿ: ಹಾಂಕಾಂಗ್ ವಿರುದ್ಧ ಅಬ್ಬರಿಸಿದ ಅಫ್ಘಾನ್

PC: x.com/Merovaeous
ಅಬುಧಾಬಿ: ಏಷ್ಯಾಕಪ್ ಟಿ20 ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಅಪ್ಘಾನಿಸ್ತಾನ, ಹಾಂಕಾಂಗ್ ತಂಡದ ವಿರುದ್ಧ 94 ರನ್ನುಗಳ ಭರ್ಜರಿ ಜಯ ಸಾಧಿಸುವ ಮೂಲಕ ಪ್ರಾಬಲ್ಯ ಮೆರೆದಿದೆ.
ಶೇಕ್ ಝಯೇದ್ ಸ್ಟೇಡಿಯಂನಲ್ಲಿ ನಡೆದ ಬಿ ಗುಂಪಿನ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ಆರಂಭಿಕ ಆಟಗಾರ ಸಿದ್ದಿಕುಲ್ಲಾ ಅಟಲ್ (ನಾಟೌಟ್ 73) ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಅಜ್ಮತ್ತುಲ್ಲಾ ಒಮರ್ಝೈ (21 ಎಸೆತಗಳಲ್ಲಿ 53) ಅವರ ಸ್ಫೋಟಕ ಬ್ಯಾಟಿಂಗ್ ನಿಂದ 6 ವಿಕೆಟ್ ನಷ್ಟಕ್ಕೆ 188 ರನ್ ಕಲೆ ಹಾಕಿತು. ಹಾಂಕಾಂಗ್ ಪರವಾಗಿ ಆರಂಭಿಕ ಬೌಲರ್ ಆಯುಷ್ ಶುಕ್ಲಾ (54ಕ್ಕೆ 2) ಅತ್ಯಂತ ದುಬಾರಿ ಬೌಲರ್ ಎನಿಸಿದರು. ಕಿಂಚಿತ್ ಶಾ (24ಕ್ಕೆ 2) ಉತ್ತಮ ಪ್ರದರ್ಶನ ನೀಡಿದರೂ ಇತರ ಬೌಲರ್ ಗಳಿಂದ ನಿರೀಕ್ಷಿತ ಬೆಂಬಲ ದೊರಕಲಿಲ್ಲ.
ಅಫ್ಘಾನಿಸ್ತಾನದ ಬಿಗಿ ಬೌಲಿಂಗ್ ಎದುರಿಸಲು ವಿಫಲರಾದ ಹಾಂಕಾಂಗ್ ಬ್ಯಾಟ್ಸ್ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದರು. ಬಾಬರ್ ಹಯಾತ್ (39) ಮತ್ತು ನಾಯಕ ಯಾಸಿಮ್ ಮುರ್ತಾಝಾ (16) ಮಾತ್ರ ಎರಡಂಕಿ ತಲುಪಿದರು. 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿದ ಹಾಂಕಾಂಗ್ ಯಾವುದೇ ಹಂತದಲ್ಲಿ ಎದುರಾಳಿಗಳಿಗೆ ಸವಾಲು ಎನಿಸಲಿಲ್ಲ. ಹಾಂಕಾಂಗ್ 45 ರನ್ ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಾಗಲೇ ಪಂದ್ಯದ ಫಲಿತಾಂಶ ನಿರ್ಧರಿತವಾಗಿತ್ತು.
ಅಫ್ಘಾನಿಸ್ತಾನದ ಬೌಲರ್ ಗಳ ಸಂಘಟಿತ ಶ್ರಮ ಪಂದ್ಯದಲ್ಲಿ ಗಮನ ಸೆಳೆಯಿತು. ಫಝಲ್ ಹಕ್ ಫಾರೂಕಿ (16ಕ್ಕೆ 2), ಗುಲ್ಬುದ್ದೀನ್ ನಯಾಬ್ (8ಕ್ಕೆ 2) ಯಶಸ್ವಿ ಬೌಲರ್ ಗಳೆನಿಸಿದರೆ, ನಾಯಕ ರಶೀದ್ ಖಾನ್ 24 ರನ್ ನೀಡಿ ಒಂದು ವಿಕೆಟ್ ಕಿತ್ತರು. ಕೇವಲ 21 ಎಸೆತಗಳಲ್ಲಿ 53 ರನ್ ಸಿಡಿಸಿದ ಅಜ್ಮತ್ತುಲ್ಲಾ ಒಮರಾಜಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.







