ಇಂದು ಆಸ್ಟ್ರೇಲಿಯ-ನೆದರ್ಲ್ಯಾಂಡ್ಸ್ ಮುಖಾಮುಖಿ

Photo : cricketworldcup.com
ಹೊಸದಿಲ್ಲಿ, : ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಬುಧವಾರ ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ತಂಡ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಆಸ್ಟ್ರೇಲಿಯವು ಕಳಪೆ ಆರಂಭ ಪಡೆದಿತ್ತು. ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯವು ಶ್ರೀಲಂಕಾ ಹಾಗೂ ಪಾಕಿಸ್ತಾನವನ್ನು ಮಣಿಸಿ ಗೆಲುವಿನ ಹಳಿಗೆ ಮರಳಿದೆ.
ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯವು ಐಸಿಸಿ ವಿಶ್ವಕಪ್ನ ಅಂಕಪಟ್ಟಿಯಲ್ಲಿ 4 ಪಂದ್ಯಗಳಲ್ಲಿ 4 ಅಂಕ ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ.
ಮತ್ತೊಂದೆಡೆ ನೆದರ್ಲ್ಯಾಂಡ್ಸ್ ತಂಡ 4 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಸಾಧಿಸಿದೆ. ಮಳೆ ಬಾಧಿತ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 38 ರನ್ ಅಂತರದಿಂದ ಏಕೈಕ ಗೆಲುವು ದಾಖಲಿಸಿತ್ತು.
ಡಚ್ ತಂಡವು ಐಸಿಸಿ ವಿಶ್ವಕಪ್ನ ಗ್ರೂಪ್ ಅಂಕಪಟ್ಟಿಯಲ್ಲಿ 4 ಪಂದ್ಯಗಳಲ್ಲಿ ಎರಡು ಅಂಕ ಗಳಿಸಿ 8ನೇ ಸ್ಥಾನದಲ್ಲಿದೆ.
ಅರುಣ್ ಜೇಟ್ಲಿ ಸ್ಟೇಡಿಯಂ ನಲ್ಲಿ ಕಳೆದ 10 ಪಂದ್ಯಗಳಲ್ಲಿ ಮೊದಲ ಇನಿಂಗ್ಸ್ ನ ಸರಾಸರಿ ಸ್ಕೋರ್ 258. ಈ ಮೈದಾನದಲ್ಲಿ ಗುರಿಯನ್ನು ನಿಗದಿಪಡಿಸಲು ಆದ್ಯತೆ ನೀಡಲಾಗುತ್ತದೆ. ಮೊದಲು ಬ್ಯಾಟಿಂಗ್ ಮಾಡಿದ್ದ ತಂಡ ಶೇ.60ರಷ್ಟು ಬಾರಿ ಜಯ ಸಾಧಿಸಿದೆ.
ಈ ಮೈದಾನವು ಸ್ಪಿನ್ನರ್ ಗಳ ಸ್ನೇಹಿಯಾಗಿದ್ದು, ಪಂದ್ಯ ಮುಂದುವರಿದಂತೆ ಮಂದಗತಿಯಲ್ಲಿ ವರ್ತಿಸುತ್ತದೆ.
*ಡೇವಿಡ್ ವಾರ್ನರ್: ಆಸ್ಟ್ರೇಲಿಯದ ಬ್ಯಾಟರ್ ಡೇವಿಡ್ ವಾರ್ನರ್ ಪ್ರಸಕ್ತ ಐಸಿಸಿ ಕ್ರಿಕೆಟ್ ವಿಶ್ವಕಪ್ ನಲ್ಲಿ 109.09ರ ಸ್ಟ್ರೈಕ್ರೇಟ್ ನಲ್ಲಿ 57ರ ಸರಾಸರಿಯಲ್ಲಿ 4 ಪಂದ್ಯಗಳಲ್ಲಿ ಒಟ್ಟು 228 ರನ್ ಗಳಿಸಿದ್ದಾರೆ.ಕೇವಲ ಒಂದು ಶತಕ ಗಳಿಸಿರುವ ವಾರ್ನರ್ ಪಾಕ್ ವಿರುದ್ಧ ಗರಿಷ್ಠ ಸ್ಕೋರ್(163 ರನ್)ಗಳಿಸಿದ್ದಾರೆ.
*ಕಾಲಿನ್ ಅಕೆರ್ಮೆನ್: ನೆದರ್ಲ್ಯಾಂಡ್ಸ್ ನ ಕಾಲಿನ್ ಅಕೆರ್ಮೆನ್ 4 ಪಂದ್ಯಗಳಲ್ಲಿ 127 ರನ್ ಗಳಿಸಿದ್ದು ಈ ಆವೃತ್ತಿಯ ವಿಶ್ವಕಪ್ ನಲ್ಲಿ ತಂಡದ ನಂ.1 ರನ್ ಸ್ಕೋರರ್ ಆಗಿದ್ದಾರೆ. 84.66ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿರುವ ಅವರು 1 ಅರ್ಧಶತಕ ಗಳಿಸಿದ್ದಾರೆ.
*ಆಡಮ್ ಝಂಪಾ: ಆಸ್ಟ್ರೇಲಿಯದ ಲೆಗ್ ಸ್ಪಿನ್ನರ್ ಝಂಪಾ 4 ಪಂದ್ಯಗಳಲ್ಲಿ 9 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಈ ವರ್ಷದ ವಿಶ್ವಕಪ್ ನಲ್ಲಿ 47ಕ್ಕೆ 4 ವಿಕೆಟ್ ಕಬಳಿಸಿ ಶ್ರೇಷ್ಠ ಬೌಲಿಂಗ್ ಮಾಡಿದ್ದಾರೆ.
*ಬಾಸ್ ಡಿ ಲೀಡ್: ನೆದರ್ಲ್ಯಾಂಡ್ಸ್ ಬೌಲರ್ ಈ ತನಕ 4 ಪಂದ್ಯಗಳಲ್ಲಿ 7 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಈ ಬಾರಿಯ ವಿಶ್ವಕಪ್ ನಲ್ಲಿ 62 ರನ್ ಗೆ 4 ವಿಕೆಟ್ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ.
*ಆಸ್ಟ್ರೇಲಿಯ-ನೆದರ್ಲ್ಯಾಂಡ್ಸ್ ಏಕದಿನ ಕ್ರಿಕೆಟ್ ನಲ್ಲಿ ಹೆಡ್-ಟು-ಹೆಡ್
ಆಸ್ಟ್ರೇಲಿಯ ಹಾಗೂ ನೆದರ್ಲ್ಯಾಂಡ್ಸ್ ಏಕದಿನ ಪಂದ್ಯದಲ್ಲಿ 2 ಬಾರಿ ಹೋರಾಟ ನಡೆಸಿವೆ. ಆಸ್ಟ್ರೇಲಿಯವು 2 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಎದುರಾಳಿ ಡಚ್ಚರು ಇನ್ನೂ ಗೆಲುವು ದಾಖಲಿಸಿಲ್ಲ.
ಈ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯವು ಗರಿಷ್ಠ ಸ್ಕೋರ್ 358 ಗಳಿಸಿದರೆ, ನೆದರ್ಲ್ಯಾಂಡ್ಸ್ ಕನಿಷ್ಠ ಸ್ಕೋರ್ 122 ರನ್ ಗಳಿಸಿದೆ.
2007ರಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಏಕದಿನ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯವು 5 ವಿಕೆಟ್ ನಷ್ಟಕ್ಕ್ಕೆ 358 ರನ್ ಗಳಿಸಿದ್ದು, ಇದು ಡಚ್ಚರ ವಿರುದ್ಧ ಆಸೀಸ್ ಗಳಿಸಿದ ಗರಿಷ್ಠ ಮೊತ್ತವಾಗಿದೆ.
2007ರಲ್ಲಿ ಆಸ್ಟ್ರೇಲಿಯ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ ನೆದರ್ಲ್ಯಾಂಡ್ಸ್ 129 ರನ್ ಗಳಿಸಿದೆ. ಇದು ಆಸೀಸ್ ವಿರುದ್ಧ ಡಚ್ಚರು ಗಳಿಸಿದ ಗರಿಷ್ಠ ಸ್ಕೋರಾಗಿದೆ.
ಆಸ್ಟ್ರೇಲಿಯವು 2003ರಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 2ಕ್ಕೆ 170 ರನ್ ಗಳಿಸಿದೆ. ಇದು ಡಚ್ಚರ ವಿರುದ್ಧ ಆಸೀಸ್ ನ ಕನಿಷ್ಠ ಸ್ಕೋರಾಗಿದೆ.
ಆಸ್ಟ್ರೇಲಿಯವು ಏಕದಿನ ಕ್ರಿಕೆಟ್ನಲ್ಲಿ ಶೇ.100ರಷ್ಟು ಗೆಲುವಿನ ದಾಖಲೆ ಹೊಂದಿದ್ದು, ಅದನ್ನು ದಿಲ್ಲಿಯಲ್ಲಿಯೂ ಮುಂದುವರಿಸಲು ಎದುರು ನೋಡುತ್ತಿದೆ.







