ಪಾಕಿಸ್ತಾನದ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕತ್ವಕ್ಕೆ ಬಾಬರ್ ಆಝಮ್ ರಾಜೀನಾಮೆ
ಬಾಬರ್ ಆಝಮ್ | PC : PTI
ಕರಾಚಿ: ಭವಿಷ್ಯದ ಪಂದ್ಯಗಳಲ್ಲಿ ಬ್ಯಾಟಿಂಗ್ನತ್ತ ಹೆಚ್ಚು ಗಮನ ನೀಡಲು ಬಯಸಿರುವೆ ಎಂದಿರುವ ಬಾಬರ್ ಆಝಮ್ ಪಾಕಿಸ್ತಾನದ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಲು ನಾನು ನಿರ್ಧಸಿದ್ದೇನೆ. ಈ ತಂಡವನ್ನು ಮುನ್ನಡೆಸಿರುವುದು ಒಂದು ಗೌರವವಾಗಿದೆ. ಆದರೆ, ನಾಯಕತ್ವ ತ್ಯಜಿಸುವ ಸಮಯ ಬಂದಿದೆ. ನನ್ನ ಬ್ಯಾಟಿಂಗ್ನತ್ತ ಹೆಚ್ಚು ಗಮನ ಹರಿಸುವೆ ಎಂದು ಈ ವರ್ಷದ ಮೇನಲ್ಲಿ ನಾಯಕನಾಗಿ ಮರು ಆಯ್ಕೆಯಾಗಿರುವ ಆಝಮ್ ಮಂಗಳವಾರ ತಡರಾತ್ರಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನದ ಮೂರು ಪಂದ್ಯಗಳ ಟೆಸ್ಟ್ ಸರಣಿಗಿಂತ ಮೊದಲು ಆಝಮ್ ರಾಜೀನಾಮೆ ನೀಡಿದ್ದಾರೆ. ಈ ಸರಣಿಯು ಮುಲ್ತಾನ್ನಲ್ಲಿ ಅಕ್ಟೋಬರ್ 7ರಿಂದ ಆರಂಭವಾಗಲಿದ್ದು, 15 ಸದಸ್ಯರ ತಂಡದಲ್ಲಿ ಆಝಮ್ ಸ್ಥಾನ ಪಡೆದಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡವು ಮುಂದಿನ ತಿಂಗಳು ಸೀಮಿತ ಓವರ್ ಸರಣಿಗಾಗಿ ಆಸ್ಟ್ರೇಲಿಯಕ್ಕೆ ತೆರಳಲಿದೆ. ಇದೀಗ ಆಝಮ್ ರಾಜೀನಾಮೆ ನೀಡಿರುವ ಕಾರಣ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ನೂತನ ನಾಯಕನನ್ನು ಆಯ್ಕೆ ಮಾಡಬೇಕಾಗಿದೆ.
ಇನ್ನು ಕೆಲವೇ ದಿನಗಳಲ್ಲಿ 30ನೇ ವರ್ಷಕ್ಕೆ ಕಾಲಿಡಲಿರುವ ಆಝಮ್ರನ್ನು ಕಳೆದ ವರ್ಷದ ನವೆಂಬರ್ನಲ್ಲಿ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡವು ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ ನಂತರ ಎಲ್ಲ ಮೂರು ಮಾದರಿಯ ಕ್ರಿಕೆಟ್ ತಂಡದ ನಾಯಕತ್ವದಿಂದ ಉಚ್ಚಾಟಿಸಲಾಗಿತ್ತು.
ಮುಹ್ಸಿನ್ ನಖ್ಬಿ ಬದಲಿಗೆ ಝಕಾ ಅಶ್ರ್ ಪಿಸಿಬಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೇನಲ್ಲಿ ಆಝಮ್ ಮತ್ತ್ಮೊಮ್ಮೆ ಏಕದಿನ ಹಾಗೂ ಟಿ20 ತಂಡದ ನಾಯಕನಾಗಿ ಮರು ಆಯ್ಕೆಯಾದರು. ಶಾಹೀನ್ ಶಾ ಅಫ್ರಿದಿಯಿಂದ ನಾಯಕತ್ವವಹಿಸಿಕೊಂಡಿದ್ದರು.
2019ರಲ್ಲಿ ಮೊದಲ ಬಾರಿ ಪಾಕಿಸ್ತಾನದ ನಾಯಕನಾಗಿ ಆಯ್ಕೆಯಾದ ನಂತರ ಆಝಮ್ ಅವರು 20 ಟೆಸ್ಟ್, 43 ಏಕದಿನ ಹಾಗೂ 85 ಟಿ20 ಪಂದ್ಯಗಳಲ್ಲಿ ಪಾಕ್ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದರು.