ಬಾಂಗ್ಲಾ ಅಂಡರ್-19 ಏಕದಿನ ಏಶ್ಯಾ ಕಪ್ ಚಾಂಪಿಯನ್
ಫೈನಲ್ನಲ್ಲಿ ಭಾರತಕ್ಕೆ 59 ರನ್ ಸೋಲು

PC : @SightScreenCJ/X.com
ದುಬೈ: ಅಂಡರ್-19 ಏಕದಿನ ಏಶ್ಯಾ ಕಪ್ ಪಂದ್ಯಾವಳಿಯ ಫೈನಲ್ನಲ್ಲಿ ರವಿವಾರ ಬಾಂಗ್ಲಾದೇಶವು ಭಾರತವನ್ನು 59 ರನ್ಗಳಿಂದ ಸೋಲಿಸಿದೆ.
ಭಾರತೀಯ ಬೌಲರ್ಗಳು ಬಾಂಗ್ಲಾದೇಶದ ಇನಿಂಗ್ಸನ್ನು 198 ರನ್ಗಳಿಗೆ ನಿಯಂತ್ರಿಸಿದರಾದರೂ, ಭಾರತೀಯ ಬ್ಯಾಟರ್ಗಳಿಗೆ ಈ ಗುರಿಯೂ ದೂರವಾಯಿತು. ಭಾರತವು 35.2 ಓವರ್ಗಳಲ್ಲಿ ಕೇವಲ 139 ರನ್ಗಳಿಗೆ ತನ್ನ ಇನಿಂಗ್ಸನ್ನು ಮುಕ್ತಾಯಗೊಳಿಸಿತು.
ದುಬೈ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತವು ಮೊದಲು ಎದುರಾಳಿಯನ್ನು ಬ್ಯಾಟಿಂಗ್ಗೆ ಇಳಿಸಿತು. ಬಾಂಗ್ಲಾದೇಶವು 49.1 ಓವರ್ಗಳಲ್ಲಿ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 198 ರನ್ಗಳನ್ನು ಗಳಿಸಿತು.
ಬಾಂಗ್ಲಾದೇಶದ ಆರಂಭವು ಉತ್ತಮವಾಗಿರಲಿಲ್ಲ. ಝವಾದ್ ಅಬ್ರಾರ್ 20 ರನ್ಗಳನ್ನು ಗಳಿಸಿದರೆ, ಇನ್ನೋರ್ವ ಆರಂಭಕಾರ ಕಲಾಮ್ ಸಿದ್ದೀಕಿ ಕೇವಲ ಒಂದು ರನ್ಗೆ ತೃಪ್ತಿಪಟ್ಟರು.
ಮುಹಮ್ಮದ್ ಶಿಹಾಬ್ ಜೇಮ್ಸ್ (67 ಎಸೆತಗಳಲ್ಲಿ 40) ಮತ್ತು ರಿಝಾನ್ ಹುಸೈನ್ (65 ಎಸೆತಗಳಲ್ಲಿ 47) ಪ್ರತಿ ಹೋರಾಟ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಫರೀದ್ ಹಸನ್ (49 ಎಸೆತಗಳಲ್ಲಿ 39 ರನ್) ತಂಡಕ್ಕೆ ಉತ್ತಮ ಬೆಂಬಲ ಒದಗಿಸಿದರು.
ಭಾರತದ ಪರವಾಗಿ ಯುದಜಿತ್ ಗುಹಾ, ಚೇತನ್ ಶರ್ಮಾ ಮತ್ತು ಹಾರ್ದಿಕ್ ರಾಜ್ ತಲಾ ಎರಡು ವಿಕೆಟ್ಗಳನ್ನು ಪಡೆದರು.
ಗೆಲ್ಲಲು 50 ಓವರ್ಗಳಲ್ಲಿ 199 ರನ್ಗಳ ಸುಲಭ ಗುರಿಯನ್ನು ಪಡೆದ ಭಾರತದ ಆರಂಭವೂ ಚೆನ್ನಾಗಿರಲಿಲ್ಲ. ಆಯುಶ್ ಮಾತ್ರೆ ಒಂದು ರನ್ಗೆ ನಿರ್ಗಮಿಸಿದರೆ, ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದದ ವೈಭವ್ ಸೂರ್ಯವಂಶಿ 7 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿ ನಿರಾಶೆ ಮೂಡಿಸಿದರು.
65 ಎಸೆತಗಳಲ್ಲಿ 26 ರನ್ ಗಳಿಸಿದ ನಾಯಕ ಮುಹಮ್ಮದ್ ಅಮಾನ್ ಗರಿಷ್ಠ ಗಳಿಕೆದಾರರಾದರು. ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ರಾಜ್ (21 ಎಸೆತಗಳಲ್ಲಿ 24 ರನ್) ಒಂದಷ್ಟು ಪ್ರತಿರೋಧ ತೋರಿದರು.
ಭಾರತವು 35.2 ಓವರ್ಗಳಲ್ಲಿ 139 ರನ್ಗಳನ್ನು ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು.
ಬಾಂಗ್ಲಾದೇಶದ ಪರವಾಗಿ ಇಕ್ಬಾಲ್ ಹುಸೈನ್ ಎಮೋನ್ ಮತ್ತು ಅಝೀಝುಲ್ ಹಕೀಮ್ ತಲಾ 3 ವಿಕೆಟ್ಗಳನ್ನು ಪಡೆದರು. ಅಲ್ ಫಾಹದ್ 2 ವಿಕೆಟ್ಗಳನ್ನು ಉರುಳಿಸಿದರು.
ಭಾರತದ ಮಹತ್ವದ ವಿಕೆಟ್ಗಳನ್ನು ಉರುಳಿಸಿದ ಇಕ್ಬಾಲ್ ಹುಸೈನ್ ಎಮೋನ್ರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.







