ಬಾಕ್ಸರ್ ಪರ್ವೀನ್ ಗೆ 22 ತಿಂಗಳು ನಿಷೇಧ | ಏಶ್ಯನ್ ಗೇಮ್ಸ್ ನ ಕಂಚಿನ ಪದಕ ನಷ್ಟ

ಪರ್ವೀನ್ ಹೂಡ | PC : PTI
ಕೋಲ್ಕತಾ: ಅಂತರರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಐಟಿಎ)ಯು ಭಾರತೀಯ ಬಾಕ್ಸರ್ ಪರ್ವೀನ್ ಹೂಡರಿಗೆ 22 ತಿಂಗಳುಗಳ ನಿಷೇಧವನ್ನು ವಿಧಿಸಿರುವ ಹಿನ್ನೆಲೆಯಲ್ಲಿ, ಭಾರತವು ಹಾಂಗ್ಝೌ ಏಶ್ಯನ್ ಗೇಮ್ಸ್ ನಲ್ಲಿ ಗಳಿಸಿರುವ ಕಂಚಿನ ಪದಕವೊಂದನ್ನು ಕಳೆದುಕೊಳ್ಳಲಿದೆ. ನಿರ್ದಿಷ್ಟ ಅವಧಿಯಲ್ಲಿ ತಾನು ಎಲ್ಲಿದ್ದೆ ಎನ್ನುವ ಮಾಹಿತಿಯನ್ನು ನೀಡಲು ವಿಫಲವಾಗಿರುವುದಕ್ಕಾಗಿ ಅವರಿಗೆ ದಂಡನೆ ವಿಧಿಸಲಾಗಿದೆ.
ಅದೇ ವೇಳೆ, ನಿಷೇಧ ಅವಧಿಯಿಂದ 8 ತಿಂಗಳನ್ನು ಅಂತರರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಐಟಿಎ)ಯು ಕಡಿತಗೊಳಿಸಿದೆ.
ತಾನು ಎಲ್ಲಿದ್ದೇನೆ ಎಂಬ ವಿಷಯವನ್ನು 12 ತಿಂಗಳುಗಳ ಅವಧಿಯಲ್ಲಿ ಮೂರು ಬಾರಿ ತಿಳಿಸಲು ವಿಫಲವಾಗಿರುವುದಕ್ಕಾಗಿ ಪರ್ವಿನ್ ರನ್ನು 2025 ಜುಲೈ 16ರವರೆಗೆ ಸ್ಪರ್ಧೆಯಿಂದ ಅಮಾನತುಗೊಳಿಸಲಾಗಿದೆ ಎಂದು ಐಟಿಎ ತಿಳಿಸಿದೆ. ಇದು ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್ ಉದ್ದೀಪನ ದ್ರವ್ಯ ನಿಗ್ರಹ ನಿಯಮಾವಳಿಗಳ ಪರಿಚ್ಛೇದ 2.4ರ ಅಡಿ ಪರ್ವೀನ್ ವಿರುದ್ಧ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
‘‘ಅದೂ ಅಲ್ಲದೆ, 2022 ಡಿಸೆಂಬರ್ 11 ಮತ್ತು 2024 ಮೇ 17ರ ನಡುವಿನ ಅವಧಿಯಲ್ಲಿ ಪರ್ವೀನ್ ರಿಂದ ಪಡೆಯಲಾಗಿರುವ ಮಾದರಿಗಳು ಕೂಡ ಪರೀಕ್ಷೆಯಲ್ಲಿ ವಿಫಲವಾಗಿವೆ’’ ಎಂದು ಐಟಿಎ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಪರ್ವೀನ್ ತನ್ನ ಏಶ್ಯನ್ ಗೇಮ್ಸ್ ಪದಕವನ್ನು ಕಳೆದುಕೊಳ್ಳುತ್ತಾರೆ ಎನ್ನುವುದನ್ನು ‘ಭಾರತೀಯ ಬಾಕ್ಸಿಂಗ್ ಫೆಡರೇಶನ್ ಕಾರ್ಯದರ್ಶಿ ಹೇಮಮತ ಕಲಿಟ ಖಚಿತಪಡಿಸಿದರು. ‘‘ಅವರ ನಿಷೇಧ ಅವಧಿಯನ್ನು ಐಟಿಎ 8 ತಿಂಗಳು ಕಡಿತಗೊಳಿಸಿದೆ. ಆದರೆ, ಆ ಅವಧಿಯ ಆಕೆಯ ಫಲಿತಾಂಶಗಳನ್ನು ರದ್ದುಗೊಳಿಸಿದೆ’’ ಎಂದು ಅವರು ತಿಳಿಸಿದರು.
2022ರ ಏಶ್ಯನ್ ಗೇಮ್ಸ್ ಪಂದ್ಯಾವಳಿಯನ್ನು ಕೋವಿಡ್ ಕಾರಣಕ್ಕಾಗಿ ಒಂದು ವರ್ಷ ಮುಂದೂಡಲಾಗಿತ್ತು. ಅದನ್ನು 2023 ಸೆಪ್ಟಂಬರ್ 23ರಿಂದ ಅಕ್ಟೋಬರ್ 8ರವರೆಗೆ ನಡೆಸಲಾಗಿತ್ತು.
2022ರ ವಿಶ್ವ ಕ್ರೀಡಾಕೂಟದಲ್ಲಿ ಪರ್ವೀನ್ 63 ಕೆಜಿ ವಿ‘ಭಾಗದಲ್ಲಿ ಕಂಚಿನ ಪದಕ ಗಳಿಸಿದ್ದರು. ಹಾಂಗ್ಝೌ ಏಶ್ಯನ್ ಗೇಮ್ಸ್ ನಲ್ಲಿ, ಮಹಿಳೆಯರ 57 ಕೆಜಿ ವಿ‘ಭಾಗದಲ್ಲಿ ಕಂಚು ಗೆದ್ದ ಅವರು ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿದ್ದರು.
ಈಗ ಅವರು ತನ್ನ ಪದಕವನ್ನು ಕಳೆದುಕೊಳ್ಳುವುದರ ಜೊತೆಗೆ, ಪ್ಯಾರಿಸ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಅರ್ಹತೆಯನ್ನೂ ಕಳೆದುಕೊಳ್ಳಲಿದ್ದಾರೆ.
ಇದರೊಂದಿಗೆ, ಚೀನಾದಲ್ಲಿ ‘ಭಾರತ ಗಳಿಸಿರುವ ಪದಕಗಳ ಸಂಖ್ಯೆ 107ರಿಂದ 106ಕ್ಕೆ ಇಳಿಯಲಿದೆ. ಆದರೆ, ಭಾರತದ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಅದು ಪದಕ ಗಳಿಕೆಯಲ್ಲಿ ನಾಲ್ಕನೇ ಸ್ಥಾನವನ್ನು ಉಳಿಸಿಕೊಳ್ಳಲಿದೆ.







