ಫಿಡೆ ರ್ಯಾಂಕಿಂಗ್: ಪ್ರಜ್ಞಾನಂದ ಜೀವನಶ್ರೇಷ್ಠ ಸಾಧನೆ

ಆರ್. ಪ್ರಜ್ಞಾನಂದ | PC: DDNEWS
ಹೊಸದಿಲ್ಲಿ, ಸೆ.1: ಫಿಡೆ ರ್ಯಾಂಕಿಂಗ್ ನಲ್ಲಿ ನಾಲ್ಕನೇ ಸ್ಥಾನ ತಲುಪಿರುವ ಆರ್. ಪ್ರಜ್ಞಾನಂದ ಜೀವನಶ್ರೇಷ್ಠ ಸಾಧನೆ ಮಾಡಿದರು. ಭಾರತದ ಗರಿಷ್ಠ ರ್ಯಾಂಕ್ ನ ಕ್ಲಾಸಿಕಲ್ ಆಟಗಾರನೆಂಬ ಹೆಗ್ಗಳಿಕೆಗೂ ಪಾತ್ರರಾದರು.
ಆಗಸ್ಟ್ನಲ್ಲಿ ಸಿಂಕ್ವೆಫೀಲ್ಡ್ ಕಪ್ ಟೂರ್ನಿಯಲ್ಲಿ ಆರು ರೇಟಿಂಗ್ ಪಾಯಿಂಟ್ಸ್ ಪಡೆದು 2ನೇ ಸ್ಥಾನ ಗಿಟ್ಟಿಸಿದ ಹಿನ್ನೆಲೆಯಲ್ಲಿ ಪ್ರಜ್ಞಾನಂದ ರ್ಯಾಂಕಿಂಗ್ ನಲ್ಲಿ ಪ್ರಗತಿ ಸಾಧಿಸಿದ್ದಾರೆ.
ನಾರ್ವೆಯ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ವಿಶ್ವ ಚಾಂಪಿಯನ್ ಅಲ್ಲದಿದ್ದರೂ ಈಗಲೂ ನಂ.1 ಕ್ಲಾಸಿಕಲ್ ಆಟಗಾರನಾಗಿದ್ದಾರೆ. ಕಾರ್ಲ್ಸನ್ ನಂತರ ಅಮೆರಿಕದ ಗ್ರ್ಯಾಂಡ್ಮಾಸ್ಟರ್ ಗಳಾದ ಹಿಕಾರು ನಕಮುರ ಹಾಗೂ ಫ್ಯಾಬಿಯೊ ಕರುವಾನಾ ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನದಲ್ಲಿದ್ದಾರೆ.
ಭಾರತದ ಇತರ ಕ್ಲಾಸಿಕಲ್ ಆಟಗಾರರಾದ ಅರ್ಜುನ್ ಎರಿಗೈಸಿ 5ನೇ ಹಾಗೂ ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ 6ನೇ ಸ್ಥಾನದಲ್ಲಿದ್ದಾರೆ.
2025ರ ಆವೃತ್ತಿಯ ಚೆನ್ನೈ ಮಾಸ್ಟರ್ಸ್ ಟೂರ್ನಿಯಲ್ಲಿ ಪ್ರಾಬಲ್ಯ ಮೆರೆದಿದ್ದ ಜರ್ಮನಿಯ ವಿನ್ಸೆಂಟ್ ಕೀಮರ್ 21 ರೇಟಿಂಗ್ ಪಾಯಿಂಟ್ಸ್ ಪಡೆದು ರ್ಯಾಂಕಿಂಗ್ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, ವಿಶ್ವ ರ್ಯಾಂಕಿಂಗ್ ನಲ್ಲಿ ಟಾಪ್-10ರಲ್ಲಿ ಸ್ಥಾನ ಪಡೆದಿದ್ದಾರೆ.
ಸಿಂಕ್ವೆಫೀಲ್ಡ್ ಕಪ್ ನಲ್ಲಿ ತನ್ನ 2ನೇ ಪ್ರಶಸ್ತಿಯನ್ನು ಜಯಿಸಿದ್ದ ವೆಸ್ಲೆ ಸೋ ಅವರು ಕ್ಲಾಸಿಕಲ್ ರ್ಯಾಂಕಿಂಗ್ನಲ್ಲಿ ವಿಶ್ವದ 7ನೇ ರ್ಯಾಂಕಿಗೆ ಜಿಗಿದಿದ್ದಾರೆ.
ಮಹಿಳೆಯರ ಕ್ಲಾಸಿಕಲ್ ರ್ಯಾಂಕಿಂಗ್ ನಲ್ಲಿ ಹೌ ಯಿಫಾನ್ ತನ್ನ ನಂ.1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಗರಿಷ್ಠ ರ್ಯಾಂಕ್ ನ ಭಾರತೀಯ ಚೆಸ್ ತಾರೆ ಕೊನೆರು ಹಂಪಿ ವಿಶ್ವ ರ್ಯಾಂಕಿಂಗ್ ನಲ್ಲಿ 6ನೇ ಸ್ಥಾನ ಉಳಿಸಿಕೊಂಡಿದ್ದಾರೆ.







