ಸಿನ್ಸಿನಾಟಿ ಓಪನ್: ಹಾಲಿ ಚಾಂಪಿಯನ್ ಗಳಾದ ಸಿನ್ನರ್, ಸಬಲೆಂಕಾ ಕ್ವಾರ್ಟರ್ ಫೈನಲ್ ಗೆ

ಜನ್ನಿಕ್ ಸಿನ್ನರ್ - Photo : x
ಸಿನ್ಸಿನಾಟಿ, ಆ.14: ಹಾಲಿ ಚಾಂಪಿಯನ್ ಗಳಾದ ಜನ್ನಿಕ್ ಸಿನ್ನರ್ ಹಾಗೂ ಆರ್ಯನಾ ಸಬಲೆಂಕಾ ಅವರು ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಮೆಂಟ್ ನಲ್ಲಿ ಕ್ವಾರ್ಟರ್ ಫೈನಲ್ ಗೆ ತಲುಪಿದ್ದಾರೆ.
ಬುಧವಾರ ಸುಮಾರು 3 ಗಂಟೆಗಳ ಕಾಲ ಸಾಗಿದ ಪುರುಷರ ಸಿಂಗಲ್ಸ್ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ವಿಶ್ವದ ನಂ.1 ಆಟಗಾರ ಸಿನ್ನರ್ ಅವರು ಫ್ರಾನ್ಸ್ ಆಟಗಾರ ಆಡ್ರಿಯಾನ್ ಮನ್ನಾರಿನೊರನ್ನು 6-4, 7-6(7/4) ಸೆಟ್ ಗಳ ಅಂತರದಿಂದ ಮಣಿಸಿದರು.
ಇಟಲಿ ಆಟಗಾರ ಸಿನ್ನರ್ ವಿಂಬಲ್ಡನ್ ಚಾಂಪಿಯನ್ ಶಿಪ್ ಗೆದ್ದ ನಂತರ ತನ್ನ ಮೊದಲ ಟೂರ್ನಮೆಂಟ್ ಆಡುತ್ತಿದ್ದಾರೆ. ಹಾರ್ಡ್ ಕೋರ್ಟ್ನಲ್ಲಿ ಸತತ 24ನೇ ಗೆಲುವು ದಾಖಲಿಸಿದರು.
‘‘ಮನ್ನಾರಿನೊ ಅತ್ಯಂತ ವಿಭಿನ್ನ ಎದುರಾಳಿ. ಅವರು ಇತರ ಆಟಗಾರರಿಗಿಂತ ಭಿನ್ನರಾಗಿದ್ದಾರೆ,ಎದುರಾಳಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲರು. ಎರಡನೇ ಸೆಟ್ ನಲ್ಲಿ ಪರದಾಟ ನಡೆಸಿದ್ದರೂ ಕ್ವಾರ್ಟರ್ ಫೈನಲ್ ತಲುಪಿದ್ದಕ್ಕೆ ಸಂತೋಷವಾಗುತ್ತಿದೆ’’ ಎಂದು ಸಿನ್ನರ್ ಹೇಳಿದ್ದಾರೆ.
ಸಿನ್ನರ್ ಮುಂದಿನ ಸುತ್ತಿನಲ್ಲಿ ಕೆನಡಾದ ಫೆಲಿಕ್ಸ್ ಆಗರ್-ಅಲಿಯಾಸ್ಸಿಮ್ ಅವರನ್ನು ಎದುರಿಸಲಿದ್ದಾರೆ. ಫೆಲಿಕ್ಸ್ ಅವರು ಫ್ರಾನ್ಸ್ ಆಟಗಾರ ಬೆಂಜಮಿನ್ ಬೊಂಝಿ ಅವರನ್ನು 6-4, 6-3 ನೇರ ಸೆಟ್ ಗಳಿಂದ ಸೋಲಿಸಿದ್ದಾರೆ.
ಫ್ರಾನ್ಸಿನ ಕ್ವಾಲಿಫೈಯರ್ ಟೆರೆನ್ಸ್ ಅಟ್ಮನ್ ನಾಲ್ಕನೇ ಶ್ರೇಯಾಂಕದ ಟೇಲರ್ ಫ್ರಿಟ್ಝ್ ಅವರನ್ನು 3-6, 7-5, 6-3 ಸೆಟ್ ಗಳ ಅಂತರದಿಂದ ಮಣಿಸಿದರು. ಈ ಮೂಲಕ ತನ್ನ ವೃತ್ತಿಜೀವನದಲ್ಲಿ ಅತಿ ದೊಡ್ಡ ಗೆಲುವು ದಾಖಲಿಸಿದರು.
‘‘ನನಗೆ ಈ ಗೆಲುವನ್ನು ನಂಬಲಾಗುತ್ತಿಲ್ಲ, ನನ್ನ ಮೈ ನಡುಗುತ್ತಿದೆ. ನನಗಾಗಿರುವ ಖುಷಿಯನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ’’ ಎಂದು ಪಂದ್ಯದ ನಂತರ 136ನೇ ರ್ಯಾಂಕಿನ ಅಟ್ಮನ್ ಪ್ರತಿಕ್ರಿಯಿಸಿದ್ದಾರೆ.
ಅಟ್ಮನ್ ಅವರು ಸೆಮಿ ಫೈನಲ್ ನಲ್ಲಿ ಸ್ಥಾನ ಪಡೆಯಲು ಮುಂದಿನ ಸುತ್ತಿನಲ್ಲಿ 7ನೇ ಶ್ರೇಯಾಂಕದ ಹೋಲ್ಗರ್ ರೂನ್ ಸವಾಲನ್ನು ಎದುರಿಸಲಿದ್ದಾರೆ. ಸ್ಥಳೀಯ ಆಟಗಾರ ಫ್ರಾನ್ಸಿಸ್ ಟಿಯಾಫೊ ಬೆನ್ನುನೋವಿನಿಂದಾಗಿ ಗಾಯಗೊಂಡು ನಿವೃತ್ತಿಯಾದಾಗ ರೂನ್ ಅವರು 6-4, 3-1 ಸೆಟ್ ಗಳಿಂದ ಮುನ್ನಡೆಯಲ್ಲಿದ್ದ ಹಿನ್ನೆಲೆಯಲ್ಲಿ ವಿಜಯಿಯಾದರು.
ಮೂರನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್ ಬುಧವಾರ ಎರಡು ಬಾರಿ ಮೈದಾನಕ್ಕೆ ಇಳಿದರು. ಮಂಗಳವಾರ 3ನೇ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಆಟಗಾರ ಝ್ವೆರೆವ್ ಅವರು ಬ್ರೆಂಡನ್ ನಕಶಿಮಾರನ್ನು 6-4, 6-4 ನೇರ ಸೆಟ್ ಗಳ ಅಂತರದಿಂದ ಸೋಲಿಸಿದರು. 4ನೇ ಸುತ್ತಿನ ಪಂದ್ಯದಲ್ಲಿ ಝ್ವೆರೆವ್ 7-5, 3-0 ಮುನ್ನಡೆಯಲ್ಲಿದ್ದಾಗ ಎದುರಾಳಿ ಕರೆನ್ ಖಚನೋವ್ ಗಾಯಗೊಂಡು ನಿವೃತ್ತಿಯಾಗಿದ್ದಾರೆ.
ಕಳೆದ ವಾರ ಟೊರೊಂಟೊ ಚಾಂಪಿಯನ್ ಆಗಿದ್ದ 5ನೇ ಶ್ರೇಯಾಂಕದ ಬೆನ್ ಶೆಲ್ಟನ್ ಅವರು ರಾಬರ್ಟೊ ಬೌಟಿಸ್ಟಾ ಅಗುಟ್ ರನ್ನು 7-6(7/3), 6-3 ಸೆಟ್ ಗಳ ಅಂತರದಿಂದ ಮಣಿಸಿ ಅಂತಿಮ-16ರ ಸುತ್ತು ತಲುಪಿದರು.
ಹಿಂದಿನ ಆರು ಪಂದ್ಯಾವಳಿಗಳಲ್ಲಿ ಫೈನಲ್ಸ್ಗೆ ತಲುಪಿದ್ದ ದ್ವಿತೀಯ ಶ್ರೇಯಾಂಕದ ಅಲ್ಕರಾಝ್ ಅವರು ಇಟಲಿಯ ಆಟಗಾರ ಲುಕಾ ನಾರ್ಡಿ ಅವರನ್ನು 6-1, 6-4 ನೇರ ಸೆಟ್ ಗಳ ಅಂತರದಿಂದ ಮಣಿಸಿದರು.
*ಸಬಲೆಂಕಾ ಅಂತಿಮ-8ರ ಸುತ್ತಿಗೆ ಲಗ್ಗೆ
ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಬಲೆಂಕಾ ಅವರು ಸ್ಪೇನ್ ಆಟಗಾರ್ತಿ ಜೆಸ್ಸಿಕಾ ಬೌಝಾಸ್ ಮನೇರೊರನ್ನು 6-1, 7-5 ನೇರ ಸೆಟ್ ಗಳ ಅಂತರದಿಂದ ಮಣಿಸಿದರು.
ಹಿಂದಿನ ಮ್ಯಾರಥಾನ್ ಪಂದ್ಯದಲ್ಲಿ ಬ್ರಿಟನ್ನ ಎಮ್ಮಾ ರಾಡುಕಾನು ಅವರನ್ನು ಸೋಲಿಸಿದ್ದ ವಿಶ್ವದ ನಂ. 1 ಆಟಗಾರ್ತಿ ಸಬಲೆಂಕಾ, ಮನೇರಾ ವಿರುದ್ಧ ನೇರ ಸೆಟ್ ಗಳ ಅಂತರದಿಂದ ಜಯಶಾಲಿಯಾಗಿದ್ದಕ್ಕೆ ಸಂಭ್ರಮ ವ್ಯಕ್ತಪಡಿಸಿದರು.
ಸಬಲೆಂಕಾ ಅವರು ಕ್ವಾರ್ಟರ್ ಫೈನಲ್ ನಲ್ಲಿ ಮಾಜಿ ವಿಂಬಲ್ಡನ್ ಚಾಂಪಿಯನ್ ಎಲೆನಾ ರೈಬಾಕಿನಾರನ್ನು ಎದುರಿಸಲಿದ್ದಾರೆ.ರೈಬಾಕಿನಾ ಅವರು ಮತ್ತೊಂದು ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಮ್ಯಾಡಿಸನ್ ಕೀಸ್ ಅವರನ್ನು 6-7(3/7), 6-4, 6-2 ಸೆಟ್ ಗಳಿಂದ ಮಣಿಸಿದರು.
ಮೂರನೇ ಶ್ರೇಯಾಂಕದ ಆಟಗಾರ್ತಿ ಇಗಾ ಸ್ವಿಯಾಟೆಕ್ ಅವರು 95 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಸೊರಾನಾ ಸಿರ್ಸ್ಟಿಯಾರನ್ನು 6-4, 6-3 ಸೆಟ್ ಗಳ ಅಂತರದಿಂದ ಮಣಿಸಿದರು. ಈ ಮೂಲಕ ಕ್ವಾರ್ಟರ್ ಫೈನಲ್ ಗೆ ತಲುಪಿದರು.







