ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ 84 ಅಥ್ಲೀಟ್ಗಳ ಸ್ಪರ್ಧೆ; ಇದು ಈವರೆಗಿನ ಭಾರತದ ಅತಿ ದೊಡ್ಡ ತಂಡ

Photo: PTI
ಹೊಸದಿಲ್ಲಿ : ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರಲ್ಲಿ ಭಾಗವಹಿಸುವ ತನ್ನ 84 ಅಥ್ಲೀಟ್ಗಳ ಹೆಸರುಗಳನ್ನು ಭಾರತ ಪ್ರಕಟಿಸಿದೆ. ಇದು ಪ್ಯಾರಾಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿರುವ ಭಾರತದ ಅತ್ಯಂತ ದೊಡ್ಡ ತಂಡವಾಗಿದೆ.
ಪ್ಯಾರಾಲಿಂಪಿಕ್ಸ್ ಆಗಸ್ಟ್ 28ರಿಂದ ಸೆಪ್ಟಂಬರ್ 8ರವರೆಗೆ ನಡೆಯಲಿದೆ. 2020ರ ಟೋಕಿಯೊ ಪ್ಯಾರಾಲಿಂಪಿಕ್ಸ್ಗೆ ಭಾರತವು 54 ಅಥ್ಲೀಟ್ಗಳನ್ನು ಕಳುಹಿಸಿತ್ತು. ಆ ಪೈಕಿ 14 ಮಂದಿ ಮಹಿಳೆಯರು. ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಆ ಸಂಖ್ಯೆ 84ಕ್ಕೆ ಏರಿದೆ. ಈ ಪೈಕಿ 32 ಮಂದಿ ಮಹಿಳಾ ಅಥ್ಲೀಟ್ಗಳು.
ಭಾರತವು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಮೂರು ಹೊಸ ಕ್ರೀಡೆಗಳಲ್ಲಿ ಭಾಗವಹಿಸಲಿದೆ. ಪ್ಯಾರಾ ಸೈಕ್ಲಿಂಗ್, ಪ್ಯಾರಾ ರೋವಿಂಗ್ ಮತ್ತು ಬ್ಲೈಂಡ್ ಜೂಡೊ. ಇದರೊಂದಿಗೆ ಭಾರತವು ಒಟ್ಟು 12 ಕ್ರೀಡೆಗಳಲ್ಲಿ ಸ್ಪರ್ಧಿಸುತ್ತದೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಒಟ್ಟು 22 ಕ್ರೀಡೆಗಳಲ್ಲಿ ಸ್ಪರ್ಧೆ ನಡೆಯುತ್ತದೆ.
ಪುರುಷರ ಸಿ2 ಪ್ಯಾರಾ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಅರ್ಶದ್ ಶೇಕ್ ಸ್ಪರ್ಧಿಸುತ್ತಾರೆ. ಮಹಿಳೆಯರ ಪ್ಯಾರಾ ಸೈಕ್ಲಿಂಗ್ ಸಿ2 ವಿಭಾಗದಲ್ಲಿ ಜ್ಯೋತಿ ಗಡೇರಿಯ ಭಾಗವಹಿಸುತ್ತಾರೆ.
ಬ್ಲೈಂಡ್ ಜೂಡೊದಲ್ಲಿ, ಪುರುಷರ 60 ಕೆಜಿ ಜೆ1 ವಿಭಾಗದಲ್ಲಿ ಕಪಿಲ್ ಪರ್ಮಾರ್ ಸ್ಪರ್ಧಿಸುತ್ತಾರೆ. ಇದೇ ಕ್ರೀಡೆಯ ಮಹಿಳೆಯರ 48 ಕೆಜಿ ಜೆ2 ವಿಭಾಗದಲ್ಲಿ ಕೋಕಿಲಾ ಭಾಗವಹಿಸುತ್ತಾರೆ.
ಪ್ಯಾರಾ ರೋವಿಂಗ್ ಕ್ರೀಡೆಯ ಪಿಆರ್3 ಮಿಕ್ಸಡ್ ಡಬಲ್ಸ್ ಸ್ಕಲ್ ವಿಭಾಗದಲ್ಲಿ ಅನಿತಾ ಮತ್ತು ಕೆ. ನಾರಾಯಣ ಭಾಗವಹಿಸಲಿದ್ದಾರೆ.
ಟೋಕಿಯೊ 2020 ಭಾರತದ ಅತ್ಯಂತ ಯಶಸ್ವಿ ಪ್ಯಾರಾಲಿಂಪಿಕ್ ಗೇಮ್ಸ್ ಆಗಿತ್ತು. ಆ ಕ್ರೀಡಾಕೂಟದಲ್ಲಿ 5 ಚಿನ್ನ, 8 ಬೆಳ್ಳಿ ಮತ್ತು ಮತ್ತು 6 ಕಂಚು ಸೇರಿ ಭಾರತ 19 ಪದಕಗಳನ್ನು ಗೆದ್ದಿದೆ.
ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಮಹಿಳೆಯರ ಆರ್2 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್1 ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಅವನಿ ಲೇಖರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲೂ ಸ್ಪರ್ಧಿಸಲಿದ್ದಾರೆ.
ಅದೇ ವೇಳೆ, ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಪುರುಷರ ಜಾವೆಲಿನ್ ಎಸೆತದ ಎಫ್64 ವಿಭಾಗದಲ್ಲಿ ಚಿನ್ನ ಗೆದ್ದಿರುವ ಸುಮಿತ್ ಅಂತಿಲ್ ಈ ಬಾರಿ ಪ್ಯಾರಿಸ್ನಲ್ಲೂ ತನ್ನ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ. ಅವರು ಎರಡು ಬಾರಿಯ ವಿಶ್ವ ಚಾಂಪಿಯನ್ ಕೂಡ ಆಗಿದ್ದಾರೆ. ಕಳೆದ ವರ್ಷ ಹಾಂಗ್ಝೂನಲ್ಲಿ ನಡೆದ ಏಶ್ಯನ್ ಪ್ಯಾರಾ ಗೇಮ್ಸ್ನಲ್ಲಿ ಅವರು 73.29 ಮೀಟರ್ ದೂರ ಈಟಿ ಎಸೆದು ವಿಶ್ವದಾಖಲೆಯನ್ನೂ ಸ್ಥಾಪಿಸಿದ್ದಾರೆ.
ಟೇಬಲ್ ಟೆನಿಸ್ನಲ್ಲಿ ಭಾರತದ ಮೊದಲ ಪ್ಯಾರಾಲಿಂಪಿಕ್ ಪದಕವನ್ನು ಗೆದ್ದಿರುವ ಭವಿನಾ ಪಟೇಲ್ ಪ್ಯಾರಿಸ್ನಲ್ಲಿ ಮಹಿಳೆಯರ ಸಿಂಗಲ್ಸ್ನಲ್ಲಿ ಸ್ಪರ್ಧಿಸಲಿದ್ದಾರೆ. ಅದೂ ಅಲ್ಲದೆ, ಅವರು ಮಹಿಳೆಯರ ಡಬಲ್ಸ್ನಲ್ಲಿ ಸೋನಾಲ್ಬೇನ್ ಪಟೇಲ್ ಜೊತೆಯಾಗಿ ಆಡಲಿದ್ದಾರೆ.
ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ, ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾರತದ ಮೊದಲ ಪದಕವನ್ನು ಗೆದ್ದಿರುವ ಹರ್ವಿಂದರ್ ಸಿಂಗ್, ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಎಸ್ಟಿ ವಿಭಾಗದಲ್ಲಿ ಪುರುಷರ ವೈಯಕ್ತಿಕ ರಿಕರ್ವ್ ಓಪನ್ ಮತ್ತು ಮಿಶ್ರ ರಿಕರ್ವ್ ಓಪನ್ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.
----







