ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆದ್ದ ದೀಪ್ತಿಯನ್ನು ಜನರು ‘ಹುಚ್ಚಿ’ ಎಂದು ಕರೆಯುತ್ತಿದ್ದರು!
ದೀಪ್ತಿ ಜೀವಂಜಿ | PC : olympics.com
ಹೊಸದಿಲ್ಲಿ : ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಮಹಿಳೆಯರ 400 ಮೀಟರ್ ಟಿ20 ಓಟದಲ್ಲಿ ಮಂಗಳವಾರ ಕಂಚಿನ ಪದಕ ಗೆದ್ದಿರುವ ಭಾರತದ ದೀಪ್ತಿ ಜೀವಂಜಿ ಸವಾಲುಗಳೊಂದಿಗೆ ಹೋರಾಡಿ ಗೆದ್ದವರು. ಅವರು ಓಟವನ್ನು 55.82 ಸೆಕೆಂಡ್ಗಳಲ್ಲಿ ಮುಗಿಸಿದರು.
ಇದಕ್ಕೂ ಮೊದಲು, ಅವರು ಜಪಾನ್ನ ಕೋಬೆಯಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಪ್ಯಾರಾ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕಾಗಿ ಚಿನ್ನವನ್ನೂ ಗೆದ್ದಿದ್ದಾರೆ.
ಅವರು ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯ ಕಲ್ಲೆಡ ಗ್ರಾಮದವರು. ಅವರು ಬಾಲ್ಯದಲ್ಲಿ ಅಪಮಾನಗಳನ್ನು ಎದುರಿಸಿ ಬೆಳೆದರು ಎಂಬುದಾಗಿ ಹೆತ್ತವರಾದ ಜೀವಂಜಿ ಯಾದಗಿರಿ ಮತ್ತು ಜೀವಂಜಿ ಧನಲಕ್ಷ್ಮಿ ನೆನಪಿಸುತ್ತಾರೆ. ದೀಪ್ತಿ ಮೆದುಳಿನ ಸಮಸ್ಯೆಯೊಂದಿಗೆ ಹುಟ್ಟಿದರು. ಈ ಸಮಸ್ಯೆಯನ್ನು ಹೊಂದಿದವರಿಗೆ ಸಂವಹನ ಮತ್ತು ಹೊಂದಿಕೊಳ್ಳುವುದು ಕಷ್ಟವಾಗುತ್ತದೆ.
‘‘ಅವರು ಸೂರ್ಯಗ್ರಹಣದ ದಿನ ಹುಟ್ಟಿದರು. ಹುಟ್ಟಿದಾಗ ಅವರ ತಲೆ ತುಂಬಾ ಸಣ್ಣದಾಗಿತ್ತು ಮತ್ತು ತುಟಿಗಳು ಮತ್ತು ಮೂಗು ಕೊಂಚ ಅಸಹಜವಾಗಿತ್ತು. ಮಗುವನ್ನು ನೋಡಿದ ಗ್ರಾಮದ ಪ್ರತಿಯೊಬ್ಬರೂ ದೀಪ್ತಿಯನ್ನು ಹುಚ್ಚಿ ಮತ್ತು ಕೋತಿ ಎಂದು ಕರೆಯುತ್ತಿದ್ದರು. ಅವಳನ್ನು ಅನಾಥಾಶ್ರಮಕ್ಕೆ ಕಳುಹಿಸುವಂತೆ ಅವರು ನಮಗೆ ಹೇಳುತ್ತಿದ್ದರು. ಇಂದು ದೂರದ ದೇಶವೊಂದರಲ್ಲಿ ಅವಳು ವಿಶ್ವ ಚಾಂಪಿಯನ್ ಆಗಿರುವುದನ್ನು ನೋಡಿದಾಗ, ತಾನು ನಿಜವಾಗಿಯೂ ವಿಶೇಷ ಹುಡುಗಿ ಎಂಬುದನ್ನು ಅವಳು ಸಾಬೀತುಪಡಿಸಿದ್ದಾಳೆ’’ ಎಂದು ದೀಪ್ತಿಯ ತಾಯಿ ಜೀವಂಜಿ ಧನಲಕ್ಷ್ಮಿ ಹೇಳಿದ್ದಾರೆ.
‘‘ನನ್ನ ಗಂಡನ ತಂದೆ ನಿಧನರಾದಾಗ ಜೀವನೋಪಾಯಕ್ಕಾಗಿ ನಾವು ನಮ್ಮ ಹೊಲವನ್ನು ಮಾರಬೇಕಾಯಿತು. ನನ್ನ ಗಂಡ ದಿನಕ್ಕೆ 100-150 ರೂ. ಸಂಪಾದಿಸುತ್ತಿದ್ದರು. ಆಗ ಕುಟುಂಬವನ್ನು ಆಧರಿಸುವುದಕ್ಕಾಗಿ ನಾನು ಕೂಡ ಕೆಲಸ ಮಾಡಬೇಕಾಗುತ್ತಿತ್ತು. ದೀಪ್ತಿ ಯಾವಾಗಲೂ ಶಾಂತವಾಗಿರುತ್ತಿದ್ದಳು ಮತ್ತು ಕಡಿಮೆ ಮಾತನಾಡುತ್ತಿದ್ದಳು. ಗ್ರಾಮದ ಮಕ್ಕಳು ಅವಳಿಗೆ ತಮಾಷೆ ಮಾಡಿದಾಗ ಅಳುತ್ತಾ ಮನೆಗೆ ಬರುತ್ತಿದ್ದಳು. ಆಗ ನಾನು ಅವಳಿಗಾಗಿ ಸಿಹಿ ಅನ್ನ ಅಥವಾ ಕೆಲವು ದಿನಗಳಲ್ಲಿ ಕೋಳಿ ಸಾರು ಮಾಡುತ್ತಿದ್ದೆ. ಆಗ ಅವಳಿಗೆ ಸಂತೋಷವಾಗುತ್ತಿತ್ತು’’ ಎಂದು ತಾಯಿ ಹೇಳಿದರು.