ಡೈಮಂಡ್ ಲೀಗ್: ಜ್ಯೂಲಿಯನ್ ವೆಬೆರ್ ಗೆ ಚೊಚ್ಚಲ ಕಿರೀಟ; ನೀರಜ್ ಚೋಪ್ರಾ ದ್ವಿತೀಯ

ಜ್ಯೂಲಿಯನ್ ವೆಬೆರ್ |ನೀರಜ್ ಚೋಪ್ರಾ PC: x.com/ESPNIndia
ಝ್ಯೂರಿಚ್: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ, ಭಾರತದ ಹೆಮ್ಮೆಯ ಅಥ್ಲೀಟ್ ನೀರಜ್ ಚೋಪ್ರಾ ಸತತ ಮೂರನೇ ವರ್ಷ ಡೈಮಂಡ್ ಲೀಗ್ ಫೈನಲ್ ನಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಝ್ಯೂರಿಚ್ ನಲ್ಲಿ ಗುರುವಾರ ನಡೆದ ಅಂತಿಮ ಹಣಾಹಣಿಯಲ್ಲಿ 90 ಮೀಟರ್ ಗೂ ಅಧಿಕ ದೂರ ಜಾವೆಲಿನ್ ಎಸೆದ ಜರ್ಮನಿಯ ಜ್ಯೂಲಿಯನ್ ವೆಬೆರ್ ಚೊಚ್ಚಲ ಪ್ರಶಸ್ತಿ ಗಳಿಸಿದರು.
ಈ ಸೀಸನ್ ನಲ್ಲಿ ಗರಿಷ್ಠ ದೂರಕ್ಕೆ ಅಂದರೆ 91.57 ಮೀಟರ್ ದೂರಕ್ಕೆ ಎಸೆದ ವೆಬೆರ್ ಅವರು ಎರಡನೇ ಸುತ್ತಿನಲ್ಲಿ ಈ ಸಾಧನೆ ಮಾಡಿದರು. ಇದು ಅವರ ಜೀವನಶ್ರೇಷ್ಠ ಸಾಧನೆಯೂ ಆಗಿದೆ. ಆರಂಭಿಕ ಪ್ರಯತ್ನದಲ್ಲಿ ವೆಬೆರ್ 91.37 ಮೀಟರ್ ದೂರಕ್ಕೆ ಎಸೆದರು. ಆ ಬಳಿಕ ಅದು ಏಕ ವ್ಯಕ್ತಿ ಪ್ರದರ್ಶನವಾಗಿ ಮುಂದುವರಿಯಿತು. ಐದೂ ಪ್ರಯತ್ನಗಳಲ್ಲಿ ಅವರು 83 ಮೀಟರ್ ರೇಖೆಯನ್ನು ದಾಟಿದರು.
ಭಾರತದ ಭರವಸೆಯ ಅಥ್ಲೀಟ್ ನೀರಜ್ ಚೋಪ್ರಾ 84.35 ಮೀಟರ್ ನೊಂದಿಗೆ ಅಭಿಯಾನ ಆರಂಭಿಸಿದರು. ನಂತರದ ಪ್ರಯತ್ನದಲ್ಲಿ 82 ಮೀಟರ್ ಸಾಧಿಸಿದರೆ, ಮೂರನೇ ಪ್ರಯತ್ನ ದೋಷಪೂರಿತವಾಯಿತು. ಈ ವೇಳೇಗೆ ಅವರು ಟೊಬಾಗೊದ ಕೆಶೋರ್ನ್ ವಾಲ್ಕಟ್ ಬಳಿಕ ಮೂರನೇ ಸ್ಥಾನದಲ್ಲಿದ್ದರು. ಎರಡು ಫೌಲ್ ಬಳಿಕ ಅಂತಿಮ ಸುತ್ತಿನಲ್ಲಿ 85.01 ಮೀಟರ್ ದೂರಕ್ಕೆ ಎಸೆದು, ವಾಲ್ಕಟ್ ಗಿಂತ ಆರು ಸೆಂಟಿ ಮೀಟರ್ ಅಂತರದ ಮುನ್ನಡೆ ಸಾಧಿಸಿ ಎರಡನೇ ಸ್ಥಾನಕ್ಕೇರಿದರು. ಹಾಲಿ ಚಾಂಪಿಯನ್ ಆ್ಯಂಡರ್ ಸನ್ ಪೀಟರ್ 82.06 ಮೀಟರ್ ಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.
"ಇದು ತೀರಾ ಕೆಟ್ಟ ಪ್ರದರ್ಶನ" ಎಂದು ಚೋಪ್ರಾ ಸ್ಪರ್ಧೆಯ ಬಳಿಕ ನುಡಿದರು. "ವಿಶ್ವಚಾಂಪಿಯನ್ಶಿಪ್ ನ ಸನಿಹದಲ್ಲಿ ನಾವಿದ್ದೇವೆ. ಆದ್ದರಿಂದ ನಾನೂ ಇನ್ನೂ ದೂರಕ್ಕೆ ಎಸೆಯಬೇಕಿತ್ತು" ಎಂದು ಅಭಿಪ್ರಾಯಪಟ್ಟರು.







